ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಟ್ಕಳದ ರಾಹುಲ್ಗೆ ಚಿನ್ನ

ಭಟ್ಕಳ: ದೇವನಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ 14 ಮತ್ತು 17 ವರ್ಷ ವಯೋಮಿತಿಯ ಬಾಲಕ–ಬಾಲಕಿಯರ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಟ್ಕಳದ ಆನಂದಾಶ್ರಮ ಶಾಲೆಯ ವಿದ್ಯಾರ್ಥಿ ಬಿ.ವಿ. ರಾಹುಲ್ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ಸಹಯೋಗದಲ್ಲಿ ನವೆಂಬರ್ 21 ಮತ್ತು 22ರಂದು ದೇವನಹಳ್ಳಿ ಜೂನಿಯರ್ ಕಾಲೇಜಿನ ಮುಂಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ, 17 ವರ್ಷ ವಯೋಮಿತಿಯೊಳಗಿನ 66 ಕೆ.ಜಿ. ವಿಭಾಗದಲ್ಲಿ ರಾಹುಲ್ ಪ್ರಥಮ ಸ್ಥಾನ ಪಡೆದು ಸ್ವರ್ಣ ಪದಕ ತಮ್ಮದಾಗಿಸಿಕೊಂಡರು.
ಭಟ್ಕಳದ ಆನಂದಾಶ್ರಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಹುಲ್, ಯುವ ಉದ್ಯಮಿ ಹಾಗೂ ನಾಮಧಾರಿ ಸಮಾಜದ ಉಪಾಧ್ಯಕ್ಷ ವಿನಾಯಕ್ ನಾಯ್ಕ್ ಮತ್ತು ಕಮಲಾ ನಾಯ್ಕ್ ದಂಪತಿಯ ಪುತ್ರ.
ರಾಹುಲ್ ಅವರ ಸಾಧನೆಗೆ ಆನಂದಾಶ್ರಮ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.




