ಸರಬಿ ನದಿಗೆ 10 ಕೋಟಿ ರೂ. ಶುದ್ಧೀಕರಣ ಯೋಜನೆ: ಕಾರವಾರ ತಂಡದಿಂದ ಪರಿಶೀಲನೆ

ಭಟ್ಕಳ: ಸರಬಿ ನದಿಯ ಶುದ್ಧೀಕರಣಕ್ಕಾಗಿ ಕರ್ನಾಟಕ ಸರ್ಕಾರವು 10 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದ್ದು, ಈ ಹಿನ್ನೆಲೆಯಲ್ಲಿ ಕಾರವಾರದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡವು ಭಟ್ಕಳಕ್ಕೆ ಭೇಟಿ ನೀಡಿ ನದಿಯ ಸ್ಥಿತಿಯನ್ನು ಪರಿಶೀಲಿಸಿದೆ.
ಶನಿವಾರ ನಡೆದ ಈ ಪರಿಶೀಲನೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎನ್. ಪ್ರಶಾಂತ್ ನೇತೃತ್ವದ ತಂಡದಲ್ಲಿ ಅಧಿಕಾರಿಗಳಾದ ರಜನಿ ಹಾಗೂ ಇನ್ನಿಬ್ಬರು ಸೇರಿದ್ದರು. ಭಟ್ಕಳದ ಮಜ್ಲಿಸ್-ಎ-ಇಸ್ಲಾಹ್-ಒ-ತಂಜೀಮ್, ಸರಾಬಿ ನದಿ ಹೋರಾಟ ಸಮಿತಿಯ ಸದಸ್ಯರು ಹಾಗೂ ಭಟ್ಕಳ ಪುರಸಭೆ ಸದಸ್ಯರ ತಂಡವು ಗೌಸಿಯಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್, ಡಾರಂಟಾ ಮತ್ತು ಡೋಂಗರಪಳ್ಳಿ ಪ್ರದೇಶಗಳಿಗೆ ಭೇಟಿ ನೀಡಿ ನದಿಯ ಮಲಿನತೆ ಹಾಗೂ ಸ್ಥಳೀಯ ಕುಡಿಯುವ ನೀರಿನ ಸಮಸ್ಯೆ ಕುರಿತು ಸಮಗ್ರ ಮಾಹಿತಿ ಪಡೆದರು.
ಅರ್ಜೆಂಟಾಗಿ ಶುದ್ಧೀಕರಣದ ಅಗತ್ಯ: ಚೌತನಿಯಿಂದ ಭಟ್ಕಳ ಬಂದರಿನವರೆಗೆ ಸುಮಾರು 5 ಕಿ.ಮೀ. ದೂರ ಹರಿಯುವ ಸರಾಬಿ ನದಿಗೆ ಕಳೆದ 100 ವರ್ಷಗಳಲ್ಲಿ ಯಾವುದೇ ಶುದ್ಧೀಕರಣ ಕಾರ್ಯ ನಡೆದಿದೆ ಎಂಬ ದಾಖಲೆಗಳಿಲ್ಲ. ತಂಜೀಮ್ ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳ ಪ್ರಕಾರ, ಗೌಸಿಯಾ ಸ್ಟ್ರೀಟ್‌ನಲ್ಲಿರುವ ಪಂಪಿಂಗ್ ಸ್ಟೇಷನ್‌ನಿಂದ ನೇರವಾಗಿ ನದಿಗೆ ಮಲಿನ ನೀರು ಬಿಡಲಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಗಂಭೀರ ಪರಿಸರ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಗೌಸಿಯಾ, ಖಲೀಫಾ, ಮುಶ್ಮಾ, ಡಾರಂಟಾ ಮತ್ತು ಡೋಂಗರಪಳ್ಳಿ ಪ್ರದೇಶಗಳ ನೂರಾರು ಭಾವಿಗಳು ಮಾಲಿನ್ಯ ಗೊಂಡಿದ್ದು, ಸ್ಥಳೀಯರ ಕುಡಿಯುವ ನೀರಿನ ಮೂಲವೇ ಹಾಳಾಗಿರುವ ಸ್ಥಿತಿ ನಿರ್ಮಾಣವಾಗಿದೆ.
ಆರೋಗ್ಯದ ಆತಂಕ: ನದಿಗೆ ಸೇರುತ್ತಿರುವ ಕೊಳಚೆ ನೀರು ಜಲಜನ್ಯ ರೋಗಗಳಾದ ಕಾಲರಾ, ಟೈಫಾಯ್ಡ್, ಡಿಸೆಂಟರಿ ಮುಂತಾದವುಗಳಿಗೆ ಕಾರಣವಾಗುವ ಸಾಧ್ಯತೆ ಇರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದು, ಇತ್ತೀಚೆಗೆ ಹೊಸ ಮೋಟಾರ್‌ಗಳನ್ನು ಸ್ಥಾಪಿಸಲಾಗಿದ್ದರೂ, ದಶಕಗಳಿಂದ ಶೇಖರಗೊಂಡಿರುವ ಮಾಲಿನ್ಯ ಸಂಪೂರ್ಣವಾಗಿ ತೊಲಗಿಲ್ಲ.
ಸ್ಥಳೀಯರ ಬೇಡಿಕೆಗಳು: ತಂಝೀಮ್ ಸಂಸ್ಥೆ ಹಾಗೂ ಸರಾಬಿ ನದಿ ರಕ್ಷಣಾ ಹೋರಾಟ ಸಮಿತಿಯು ಈ ಸಮಸ್ಯೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (NGT) ಕೊಂಡೊಯ್ಯುವ ಚಿಂತನೆ ನಡೆಸಿದ್ದು, ಗಂಭೀರ ಪರಿಸರ ಪೀಡನೆಗೆ ತಕ್ಷಣ ಪರಿಹಾರ ಸಿಗಬೇಕೆಂದು ಒತ್ತಾಯಿಸುತ್ತಿದೆ. ಇವರ ಪ್ರಕಾರ, ರೂ.10 ಕೋಟಿ ಮೊತ್ತವು ಸಂಪೂರ್ಣ ಶುದ್ಧೀಕರಣಕ್ಕೆ ಪರ್ಯಾಯವಲ್ಲ. ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಕನಿಷ್ಠ 3 ಕಿ.ಮೀ. ನದಿಯ ಭಾಗದ ಶುದ್ಧೀಕರಣ ಹಾಗೂ ಡೋಂಗರಪಳ್ಳಿಯಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳನ್ನು ಮನವರಿಕೆ ಮಾಡಲಾಗಿದೆ.
ಅಳಿವಿನ ಅಂಚಿನಲ್ಲಿ ಐತಿಹಾಸಿಕ ನದಿ: ಸರಾಬಿ ನದಿ ಒಂದು ಕಾಲದಲ್ಲಿ ವಾಣಿಜ್ಯಕ್ಕೆ ಪ್ರಮುಖ ದಾರಿ ಆಗಿದ್ದು, ಅರಬ್ ವ್ಯಾಪಾರಿಗಳು ಅರೇಬಿಯನ್ ಸಮುದ್ರದಿಂದ ಈ ನದಿಯ ಮೂಲಕ ಭಟ್ಕಳ ಪ್ರವೇಶಿಸಿ ವ್ಯಾಪಾರದ ಚಟುವಟಿಕೆ ನಡೆಸುತ್ತಿದ್ದರೆಂದು ಇತಿಹಾಸವಿದೆ. ಆದರೆ ಇಂದು ನದಿ ಸಂಪೂರ್ಣವಾಗಿ ಮಲಿನ ನೀರಿನಿಂದ ಕೂಡಿದ ಒಡ್ಡಿಗೆಯಂತಾಗಿದೆ. ದಶಕಗಳಿಂದಲೂ ಶುದ್ಧಿಯಾಗದ ಸರಾಬಿ ನದಿಯಲ್ಲಿ ಹೂಳು ತುಂಬಿಕೊಂಡಿದ್ದು ಅಳಿವಿನ ಅಂಚಿನಲ್ಲಿದೆ. ಸರ್ಕಾರ ಕೊನೆಗೂ ಕಣ್ಣು ತೆರೆದಿದ್ದು ಈ ನದಿಯ ಸ್ವಚ್ಚತೆಗಾಗಿ ರೂ.10ಕೋಟಿ ಮಂಜೂರು ಮಾಡಿದೆ. ಆದರೆ ಸುಮಾರು 5ಕಿಮೀ ವ್ಯಾಪಿಸಿರುವ ಈ ನದಿಯ ಶುದ್ಧಿಕರಣಕ್ಕಾಗಿ ಈ ಹಣ ಸಾಲದು ಎಂಬುದು ಸ್ಥಳಿಯರ ಹಾಗೂ ಹೋರಾಟ ಸಮಿತಿಯ ಮುಖಂಡರ ವಾದವಾಗಿದೆ.
ನದಿಯ ಪರಿಶೀಲನಗೆಗಾಗಿ ಬಂದ ಅಧಿಕಾರಿಗಳ ನಿಯೋಗದ ಜೊತೆಗೆ ಸ್ಥಳಿಯ ತಂಝಿಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ., ಇಮ್ರಾನ್ ಲಂಕ, ಅಜೀಜುರ್ ರಹಮಾನ್ ರುಕ್ನುದ್ದೀನ್, ಟಿಎಂಸಿ ಅಧ್ಯಕ್ಷ ಅಲ್ತಾಫ್ ಖರೂರಿ, ಸದಸ್ಯ ಕೈಸರ್ ಮೊಹತಶಮ್, ಸರಾಬಿ ನದಿ ಹೋರಾಟ ಸಮಿತಿಯ ತೈಮೂರ್ ಗವಾಯಿ, ಅಶ್ಫಾಕ್ ಕೆ.ಎಂ. ಹಾಗೂ ಇತರರು ಉಪಸ್ಥಿತರಿದ್ದರು.
-ಎಂ.ಆರ್.ಮಾನ್ವಿ







