ಭಟ್ಕಳ: ಜು.13ರಿಂದ ನ್ಯೂ ಶಮ್ಸ್ ಸ್ಕೂಲ್ ವತಿಯಿಂದ ಪರಿಸರ ಜಾಗೃತಿ ಅಭಿಯಾನ

ಭಟ್ಕಳ: ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳು, ಚಿಲ್ಡ್ರನ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (CIO) ಸಹಯೋಗದೊಂದಿಗೆ, ಪರಿಸರ ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಕಳಕಳಿಯೊಂದಿಗೆ ಜುಲೈ 13ರಿಂದ 31ರವರೆಗೆ “ಮಣ್ಣಿನೊಂದಿಗೆ ಕೈಗಳು, ಭಾರತ ದೊಂದಿಗೆ ಹೃದಯಗಳು” ಎಂಬ ಶೀರ್ಷಿಕೆಯಡಿ ಪರಿಸರ ಜಾಗೃತಿ ಅಭಿಯಾನವನ್ನು ಆಯೋಜಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಲಿಯಾಖತ್ ಅಲಿ ತಿಳಿಸಿದ್ದಾರೆ.
ಗುರುವಾರ ನ್ಯೂ ಶಮ್ಸ್ ಸ್ಕೂಲ್‌ನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನವನ್ನು ಜುಲೈ 13ರಂದು ಶಾಲೆಯ ಸಭಾಂಗಣದಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಉದ್ಘಾಟಿಸಲಾಗುವುದು ಎಂದರು. ಈ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಸಸಿಗಳನ್ನು ಪಾಲಕರಿಗೆ ವಿತರಿಸಲಾಗುವುದು. ಈ ಸಸಿಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ವಿದ್ಯಾರ್ಥಿ ಗಳು ಮತ್ತು ಪಾಲಕರು ಒಟ್ಟಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಅಭಿಯಾನದ ಲೋಗೊ ಬಿಡುಗಡೆ ಮತ್ತು ಸಾಂಕೇತಿಕ ಗಿಡ ನೆಡುವ ಕಾರ್ಯಕ್ರಮವೂ ನಡೆಯಲಿದೆ. ಅಭಿಯಾನದ ಭಾಗವಾಗಿ, ಪರಿಸರ ಜಾಗೃತಿ ರ‍್ಯಾಲಿ, ವಿವಿಧ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸಸಿಗಳನ್ನು ನೀಡುವುದು, ಸಂಘ-ಸಂಸ್ಥೆಗಳ ಮುಖಂಡರೊಂದಿಗೆ ಸಂವಾದ, ಸಸಿ ಗಳೊಂದಿಗೆ ಸೆಲ್ಫಿ ಸ್ಪರ್ಧೆ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಮತ್ತು ಸಾರ್ವಜನಿಕರಲ್ಲಿ ಪರಿಸರ ಪ್ರೇಮ ಹಾಗೂ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ 5ನೇ ತರಗತಿ ವಿದ್ಯಾರ್ಥಿನಿ ಆಯಿಶಾ ಅರ್ಫೀನ್ ಮುಲ್ಲಾ ಹಾಗೂ 4ನೇ ತರಗತಿ ವಿದ್ಯಾರ್ಥಿನಿ ಔಫಾ ಅಮಲ್ ಅವರು ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಪರಿಸರ ಕುರಿತು ಮಾತನಾಡಿದರು.
ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಚೇರ್ಮನ್ ನಝೀರ್ ಆಹಮದ್ ಖಾಜಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಅವರು ಪರಿಸರ ಸಂರಕ್ಷಣೆ ಯಲ್ಲಿ ಇಸ್ಲಾಮ್‌ನ ಮಾರ್ಗದರ್ಶನ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಕೊಡುಗೆಯ ಬಗ್ಗೆ ವಿವರಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಮೌಲಾನ ಸಯ್ಯದ್ ಖುತುಬ್ ಬರ್ಮಾವರ್, ಶಮ್ಸ್ ಪಿಯು ಕಾಲೇಜಿನ ಆಡಳಿತ ಪ್ರಾಂಶುಪಾಲ ಎಂ.ಆರ್. ಮಾನ್ವಿ ಉಪಸ್ಥಿತರಿದ್ದರು.







