ನ. 17ರಿಂದ ಸರಾಬಿ ನದಿ ಸ್ವಚ್ಛತಾ ಕಾರ್ಯ ಆರಂಭ

ಭಟ್ಕಳ: ಪಟ್ಟಣದ ಹಳೆಯ ಬಡಾವಣೆಗಳ ಮೂಲಕ ಹರಿಯುವ ಸರಾಬಿ ನದಿಯ ಹೂಳೆತ್ತುವ ಮತ್ತು ಸ್ವಚ್ಛತಾ ಕಾಮಗಾರಿ ನ. 17ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಹಾಗೂ ಕಾರವಾರದ ನೀರಾವರಿ ಇಲಾಖೆ ಅಧಿಕಾರಿಗಳು ಮಂಗಳವಾರ ಡೊಂಗರಪಳ್ಳಿ ಮತ್ತು ಡಾರಂಟ ಪ್ರದೇಶಗಳಿಗೆ ಭೇಟಿ ನೀಡಿ ಕಾಮಗಾರಿ ನಡೆಯಲಿರುವ ಸ್ಥಳಗಳನ್ನು ಪರಿಶೀಲಿಸಿದರು.
ಗುತ್ತಿಗೆದಾರ ಸುನೀತ್ ಹೆಗಡೆ ಮಾತನಾಡಿ, ನದಿಯಲ್ಲಿ ಸಂಗ್ರಹವಾಗಿರುವ ಹೂಳು, ಕೆಸರು ಹಾಗೂ ಮುಳ್ಳಿನ ಗಿಡಗಂಟಿಗಳನ್ನು ತೆರವುಗೊಳಿಸಿ ನದಿಯ ಆಳ ಹೆಚ್ಚಿಸಲಾಗುವುದು. ಶಾಸಕ ಮಂಕಾಳ ವೈದ್ಯ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸರಾಬಿ ನದಿಯ ಸ್ವಚ್ಛತೆ ಮತ್ತು ಪುನರುಜ್ಜೀವನಕ್ಕಾಗಿ 10 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಮಂಕಾಳ ವೈದ್ಯ ಈ ಹಿಂದೆ ಘೋಷಿಸಿದ್ದರು. ಯೋಜನೆಯಡಿ ಚೌತಣಿ ಸಮೀಪದ ಕುಡ್ರೆಬಿರಪ್ಪ ದೇವಸ್ಥಾನದಿಂದ ಡೊಂಗರಪಳ್ಳಿವರೆಗೆ 1.9 ಕಿ.ಮೀ. ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತದೆ. ನದಿಯನ್ನು ಮೂರು ಮೀಟರ್ ಆಳಕ್ಕೆ ಅಭಿವೃದ್ಧಿಪಡಿಸುವ ಉದ್ದೇಶವೂ ಯೋಜನೆಯಲ್ಲಿದೆ.
ಕಾಮಗಾರಿಯನ್ನು 2026ರ ಜನವರಿಯಲ್ಲಿ ಆರಂಭಿಸಿ ಮೂರು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಈ ಹಿಂದೆ ಅಧಿಕಾರಿಗಳು ತಿಳಿಸಿದ್ದರು. ಆದರೆ ನಿಗದಿತ ಅವಧಿಯಲ್ಲಿ ಆರಂಭವಾಗದೆ ವಿಳಂಬವಾಗಿದ್ದು, ಇದೀಗ ನವೆಂಬರ್ 17ಕ್ಕೆ ಚಾಲನೆ ನೀಡಲು ಸಿದ್ಧತೆ ನಡೆದಿದೆ. ಸುಮಾರು ಐದು ಕಿ.ಮೀ. ಉದ್ದದ ನದಿಯ ಸಂಪೂರ್ಣ ಅಭಿವೃದ್ಧಿಗೆ ಮಂಜೂರಾದ ಅನುದಾನ ಸಾಲದ ಹಿನ್ನೆಲೆಯಲ್ಲಿ, ಮೊದಲ ಹಂತದಲ್ಲಿ ಡೊಂಗರಪಳ್ಳಿಯಲ್ಲಿ ತಡೆಗೋಡೆ ನಿರ್ಮಾಣ ಮತ್ತು ಹೆಚ್ಚು ಹಾನಿಗೊಳಗಾದ ಭಾಗಗಳ ಸ್ವಚ್ಛತೆಗೆ ಆದ್ಯತೆ ನೀಡುವ ಸಾಧ್ಯತೆಯಿದೆ.
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಾರವಾರದ ನೀರಾವರಿ ಇಲಾಖೆ ಎಂಜಿನಿಯರ್ ರಜನಿ ತಳೇಕರ್, ಭಟ್ಕಳ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಜೀಜುರ್ ರಹಮಾನ್ ರುಕ್ನುದ್ದೀನ್ ನದ್ವಿ, ಸೈಯ್ಯದ್ ಇಮ್ರಾನ್ ಲಂಕಾ, ಸಿಟಿ ಮೆಡಿಕಲ್‌ನ ಇಕ್ಬಾಲ್ ಸುಹೇಲ್, ಬಿಲಾಲ್ ಖಮ್ರಿ ಮತ್ತಿತರರು ಉಪಸ್ಥಿತರಿದ್ದರು.
ಒಳಚರಂಡಿ ನೀರು ಹರಿವು ತಡೆಯದಿದ್ದರೆ ಸ್ವಚ್ಛತಾ ಕಾರ್ಯ ವ್ಯರ್ಥ
ಸರಾಬಿ ನದಿಯ ಸ್ವಚ್ಛತಾ ಕಾಮಗಾರಿಗೆ ಸಿದ್ಧತೆ ನಡೆದಿರುವ ನಡುವೆಯೇ, ಗೌಸಿಯಾ ಸ್ಟ್ರೀಟ್‌ನ ಯುಜಿಡಿ ಪಂಪಿಂಗ್ ಸ್ಟೇಷನ್‌ನಿಂದ ಕೊಳಚೆ ನೀರು ನದಿಗೆ ಸೇರುತ್ತಿರುವ ಸಮಸ್ಯೆ ಮುಂದುವರಿದಿದೆ. ಈ ಹರಿವಿಗೆ ಕಡಿವಾಣ ಹಾಕದಿ ದ್ದರೆ ನದಿ ಸ್ವಚ್ಛತಾ ಕಾರ್ಯದಿಂದ ನಿರೀಕ್ಷಿತ ಪ್ರಯೋಜನ ದೊರೆಯುವುದಿಲ್ಲ ಎಂಬುದು ಸ್ಥಳೀಯರ ಆತಂಕವಾಗಿದೆ.
ನವೆಂಬರ್ 7ರಂದು ನಗರಸಭೆ ಆಯುಕ್ತ ಬಾಬಾಸಾಹೇಬ್ ಮಾನೆ ಮತ್ತು ಕಾರವಾರದ ಸಹಾಯಕ ಕಾರ್ಯನಿರ್ವಾ ಹಕ ಎಂಜಿನಿಯರ್ ಸದಾನಂದ ಅವರು ಪಂಪಿಂಗ್ ಸ್ಟೇಷನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ನ. 11ರಂದು ಕಾರವಾರದ ನೀರು ಸರಬರಾಜು ಮಂಡಳಿಯ ಎಂಜಿನಿಯರ್‌ಗಳ ತಂಡ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದರು.
ಆದರೆ ಬುಧವಾರ ಸಂಜೆವರೆಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡದಿರುವುದು ನಿವಾಸಿಗಳ ಅಸಮಾಧಾ ನಕ್ಕೆ ಕಾರಣವಾಗಿದೆ. ನದಿ ಸ್ವಚ್ಛತಾ ಕಾಮಗಾರಿಯ ಜೊತೆಗೆ ಕೊಳಚೆ ನೀರು ನದಿಗೆ ಸೇರುವುದನ್ನು ಶಾಶ್ವತವಾಗಿ ತಡೆಯುವ ಕ್ರಮವೂ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.






