ಭಟ್ಕಳ| ಅ. 24ರಂದು ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಟಿಸಿಎಸ್ ಉದ್ಯೋಗ ಮೇಳ

ಭಟ್ಕಳ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಹಯೋಗದಲ್ಲಿ ಇಲ್ಲಿನ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಸಂಸ್ಥೆಯ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ಅಕ್ಟೋಬರ್ 24ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದ ಮೂಲಕ 500 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಅಂಜುಮನ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೋ.ಯೂಸೂಫ್ ಕೋಲಾ ತಿಳಿಸಿದ್ದಾರೆ.
ಅವರು ಗುರುವಾರ ಕಾಲೇಜಿನ ಪ್ರಾಂಶುಪಾಲರ ಕಚೇರಿಯಲ್ಲಿ ಟಿಸಿಎಸ್ ಉದ್ಯೋಗ ಮೇಳದ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಬಿ.ಕಾಂ, ಬಿ.ಎ, ಬಿಬಿಎ, ಬಿಬಿಎಂ, ಬಿಎಸ್ಸಿ, ಬಿಸಿಎ, ಬಿಎಎಫ್ ಹಾಗೂ ಬಿಬಿಐ ಪದವಿ ಪಡೆದಿರುವ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು. 2024, 2025 ಮತ್ತು 2026ರಲ್ಲಿ ಪದವಿ ಪೂರ್ಣಗೊಳಿಸಿದ ಅಥವಾ ಪೂರ್ಣಗೊಳಿಸುತ್ತಿರುವ ಅಭ್ಯರ್ಥಿಗಳಿಗೆ ಅವಕಾಶವಿದೆ.
ಹಿಂದಿ, ಉರ್ದು, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಜ್ಞಾನ ಹಾಗೂ ಉತ್ತಮ ಸಂವಹನ ಕೌಶಲ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 19,000 ಆರಂಭಿಕ ವೇತನ ನೀಡಲಾಗುವುದು ಎಂದು ಅವರು ತಿಳಿಸಿದರು.
ಅ. 24ರಂದು ಬೆಳಿಗ್ಗೆ 8.30ಕ್ಕೆ ನೋಂದಣಿ ಆರಂಭವಾಗಲಿದ್ದು, ಬಳಿಕ ಸಾಮರ್ಥ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮುರುಡೇಶ್ವರ, ಕುಮಟಾ, ಅಂಕೋಲಾ, ಕಾರವಾರ ಸೇರಿದಂತೆ ವಿವಿಧ ಪ್ರದೇಶ ಗಳ ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬೈಂದೂರು, ಕುಂದಾಪುರ, ಶಿರೂರು ಮತ್ತು ಮಂಗಳೂರು ಭಾಗದ ಅರ್ಹ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಂಜುಮನ್ ಕಾಲೇಜ್ ಬೋರ್ಡ್ ಕಾರ್ಯದರ್ಶಿ ಫಯ್ಯಾಝ್ ಆಹ್ಮದ್ ಕೋಲಾ, ಪ್ರೋ.ಗಾನಿಂ ಮೊಹತೇಶಮ್, ಪ್ರೋ.ದಾಮೋದರ್ ನಾಯ್ಕ ಉಪಸ್ಥಿತರಿದ್ದರು.






