ಭಟ್ಕಳ| ಡಿ.25ರಿಂದ ‘ಭಟ್ಕಳ ಉತ್ಸವ’

ಭಟ್ಕಳ: ಭಟ್ಕಳದ ಕ್ರಿಯಾಶೀಲ ಗೆಳೆಯರ ಸಂಘದ ವತಿಯಿಂದ ನಗರದ ಇತಿಹಾಸದಲ್ಲೇ ವಿಭಿನ್ನವಾಗಿ ‘ಭಟ್ಕಳ ಉತ್ಸವ’ ವನ್ನು ಆಯೋಜಿಸಲಾಗಿದ್ದು, ಡಿಸೆಂಬರ್ 25ರಿಂದ 28ರವರೆಗೆ ಖಾಜಿಯಾ ಕಂಪೌಂಡ್, ಜಾಗಟೆಬೈಲು, ಎನ್‌ಎಚ್–66 ರಲ್ಲಿ ನಡೆಯಲಿದೆ.
ಈ ಕುರಿತು ಬುಧವಾರ ಬೆಳಗ್ಗೆ ಭಟ್ಕಳದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದರು.
ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ರಮೇಶ್ ಖಾರ್ವಿ ಮಾತನಾಡಿ, ನಾಲ್ಕು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು ಮತ್ತು ವಿವಿಧ ಮೇಳಗಳು ಜನರನ್ನು ಆಕರ್ಷಿಸಲಿವೆ ಎಂದರು. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಉತ್ಸವ ನಡೆಯಲಿದೆ ಎಂದು ತಿಳಿಸಿದರು.
ಉತ್ಸವದ ಸಂಚಾಲಕ ಶ್ರೀಕಾಂತ್ ನಾಯ್ಕ್ ಮಾಹಿತಿ ನೀಡುತ್ತಾ, ಕೃಷಿ ಮತ್ತು ಸಾವಯವ ತರಕಾರಿ ಮೇಳ, ವಿವಿಧ ಆಹಾರ ಮೇಳ, ಸೀರೆ ಹಾಗೂ ಉಡುಪು ಮೇಳ, ಮತ್ಸ್ಯಮೇಳ, ಉದ್ಯಮಗಳ ಮಾಹಿತಿ ಕೇಂದ್ರ, ಐಸ್‌ಕ್ರೀಮ್ ಮೇಳ, ಗುಡಿ ಕೈಗಾರಿಕೆ ವಸ್ತು ಮೇಳ, ಹಲಸಿನ ಹಣ್ಣಿನ ಮೇಳ, ಮಕ್ಕಳಿಗಾಗಿ ಅಮ್ಮ್ಯೂಸ್ಮೆಂಟ್ ಪಾರ್ಕ್ ಹಾಗೂ ವಾಲಿಬಾಲ್ ಕ್ರೀಡೆ ಸೇರಿ ಹಲವಾರು ಆಕರ್ಷಣೆಗಳು ಇರಲಿವೆ ಎಂದರು.
ಈ ಉತ್ಸವವನ್ನು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರು ಉದ್ಘಾಟಿಸಲಿದ್ದಾರೆ. ರಾಜ್ಯಮಟ್ಟದ ಜನಪ್ರಿಯ ಕನ್ನಡ ಕಲಾವಿದರಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು, ಜೊತೆಗೆ ಯುವಜನ ಮೇಳ, ಜಾನಪದ ಕಾರ್ಯಕ್ರಮಗಳು ಮತ್ತು ಮಕ್ಕಳ ಪ್ರತಿಭಾ ಪ್ರದರ್ಶನವೂ ನಡೆಯಲಿದೆ ಎಂದು ಹೇಳಿದರು.
ಉತ್ಸವವು ಖಾಜಿಯಾ ಕಂಪೌಂಡ್, ಜಾಗಟೆಬೈಲು, ಎನ್‌ಎಚ್–66, ವೆಂಕಟಪುರದಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಸಂಘದವರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ್, ನಜೀರ್ ಕಾಸಿಂ, ವಿವಿಧ ಮೇಳಗಳ ಸಂಯೋಜಕ ಶ್ರೀಧರ್ ಮರುವಂತೆ ಹಾಗೂ ಕ್ರಿಯಾಶೀಲ ಗೆಳೆಯರ ಸಂಘದ ಸದಸ್ಯರು ಉಪಸ್ಥಿತರಿದ್ದರು.







