ಭಟ್ಕಳ| ಸೆ. 3ರಂದು ಅಂತರ್ ಕಾಲೇಜು ಇತಿಹಾಸ ಸಂಶೋಧನಾ ಮೇಳ

ಭಟ್ಕಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ಭಟ್ಕಳ ಘಟಕದ ಆಶ್ರಯದಲ್ಲಿ 'ಇಂಪ್ರಿಂಟ್ಸ್ ಆಫ್ ದಿ ಪಾಸ್ಟ್–2026' ಹೆಸರಿನ ಭಟ್ಕಳ ತಾಲೂಕು ಮಟ್ಟದ ಅಂತರ್ ಕಾಲೇಜು ಇತಿಹಾಸ ಸಂಶೋಧನಾ ಮೇಳವನ್ನು ಸೆಪ್ಟೆಂಬರ್ 3ರಂದು ನ್ಯೂ ಶಮ್ಸ್ ಶಾಲೆಯಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಬುಧವಾರ ಪಟ್ಟಣದ ದಾವತ್ ಸೆಂಟರ್‌ನ ಎಸ್‌ಐಒ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಐಒ ಕರ್ನಾಟಕ ರಾಜ್ಯಾಧ್ಯಕ್ಷ ಆದಿ ಅಲ್ ಹಸನ್ ಮಾಹಿತಿ ಪೋಸ್ಟರ್ ಬಿಡುಗಡೆಗೊಳಿಸಿದರು.
'ಅನ್ವೇಷಿಸಿ, ಸಂಶೋಧಿಸಿ, ಸಂರಕ್ಷಿಸಿ' ಎಂಬ ಧ್ಯೇಯವಾಕ್ಯದಡಿ ನಡೆಯಲಿರುವ ಈ ಮೇಳದ ಉದ್ದೇಶ, ವಿದ್ಯಾರ್ಥಿ ಗಳಲ್ಲಿ ಇತಿಹಾಸದ ಬಗ್ಗೆ ಆಸಕ್ತಿ, ಸಂಶೋಧನಾ ಮನೋಭಾವ ಹಾಗೂ ಸಾಕ್ಷ್ಯಾಧಾರಿತ ಅಧ್ಯಯನವನ್ನು ಉತ್ತೇಜಿ ಸುವುದಾಗಿದೆ. ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ಇತಿಹಾಸ, ಸ್ಮಾರಕಗಳು, ಐತಿಹಾಸಿಕ ವ್ಯಕ್ತಿಗಳು, ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳು, ಮಾದರಿಗಳು, ಡಿಜಿಟಲ್ ಪ್ರಸ್ತುತಿಗಳು, ಸಾಕ್ಷ್ಯಚಿತ್ರಗಳು ಸೇರಿದಂತೆ ವಿವಿಧ ರೂಪಗಳಲ್ಲಿ ತಮ್ಮ ಸಂಶೋಧನೆ ಯನ್ನು ಮಂಡಿಸಲಿದ್ದಾರೆ.
ಸ್ಪರ್ಧೆಯಲ್ಲಿ ಉತ್ತಮ ಸಂಶೋಧನಾ ಪ್ರಸ್ತುತಿಗಳಿಗೆ 30 ಸಾವಿರ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್‌ಐಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜೋಹರ್ ಕಾಶಿಫ್, ಭಟ್ಕಳ ಘಟಕದ ಅಧ್ಯಕ್ಷ ಝಯ್ಯಾನ್ ಬಂಗಾಲಿ ಹಾಗೂ ಸಂಘಟನೆಯ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.




