40 ಅಡಿ ಆಳದ ಬಾವಿಗೆ ಬಿದ್ದ ರಾಸು; ಅಗ್ನಿಶಾಮಕದಳದಿಂದ ರಕ್ಷಣೆ

ಭಟ್ಕಳ: 40 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ರಾಸುವೊಂದನ್ನು ಸ್ಥಳೀಯರು ಹಾಗೂ ಅಧಿಕಾರಿಗಳು ಶನಿವಾರ ಬೆಳಿಗ್ಗೆ ರಕ್ಷಿಸಿದ ಘಟನೆ ಮುರುಢೇಶ್ವರ ಸಮೀಪ ಮಾವಳ್ಳಿ–1ರ ಕೋಣಾರಕೇರಿಯಲ್ಲಿ ನಡೆದಿದೆ.
ಜಟ್ಟಾ ರಾಮ ನಾಯ್ಕ ಎಂಬುವವರ ತೋಟದ ಬಾವಿಗೆ ಅಕಸ್ಮಿಕವಾಗಿ ರಾಸು(ಹೋರಿ) ಬಂದು ಬಿದ್ದಿದೆ ಎನ್ನಲಾಗಿದೆ. ಬಾವಿಯಲ್ಲಿ ಸುಮಾರು 10 ಅಡಿ ನೀರು ಇದ್ದು, ರಾಸುವಿನ ಸದ್ದು ಕೇಳಿದ ಸ್ಥಳೀಯರು ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು, ಬಾವಿಗೆ ಇಳಿದು ರಾಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಾಕ ಠಾಣಾಧಿಕಾರಿ ಮಹಮ್ಮದ್ ಶಫಿ ಮೊಗಲ್ ಸೇರಿದಂತೆ ಸಿಬ್ಬಂದಿ ಮೋಹನ್ ಶೆಟ್ಟಿ, ಗಜಾನನ ದೇವಾಡಿಗ, ಶಿವಪ್ರಸಾದ್ ನಾಯ್ಕ, ಸುಧಾಕರ ದೇವಾಡಿಗ ಹಾಗೂ ಸಾತಪ್ಪ ನುಚ್ಚಂಡಿ ಪಾಲ್ಗೊಂಡಿದ್ದರು.
ರಾಸುವನ್ನು ಯಾವುದೇ ಅಪಾಯವಿಲ್ಲದೆ ರಕ್ಷಿಸಿದ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




