ಅಂಕೋಲಾ: ಉರುಳಿಬಿದ್ದ ಟ್ಯಾಂಕರ್ ನಿಂದ ಮಿಥೇನ್ ಸೋರಿಕೆ ತಡೆಗಟ್ಟಿದ ತಜ್ಞರ ತಂಡ

ಅಂಕೋಲಾ: ತಾಲೂಕಿನ ಬೊಗ್ರಿಬೈಲ್ ನವಗದ್ದೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದಿದ್ದ ಟ್ಯಾಂಕರ್‌ನಿಂದ ಉಂಟಾಗಿದ್ದ ಮಿಥೇನ್ ಅನಿಲ ಸೋರಿಕೆಯನ್ನು ತಡೆಗಟ್ಟುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ.
ಗುಜರಾತ್‌ನಿಂದ ಮಂಗಳೂರು ಕಡೆಗೆ ಮಿಥೇನ್ ಅನಿಲ ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್, ನ.18ರಂದು ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನವಗದ್ದೆ ಬಳಿ ರಸ್ತೆಯಲ್ಲಿದ್ದ ಹೊಂಡವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಟ್ಯಾಂಕರ್ ರಭಸವಾಗಿ ಬಿದ್ದ ಪರಿಣಾಮ ಮಿಥೇನ್ ಅನಿಲ ಸೋರಿಕೆಯಾಗಲಾರಂಭಿಸಿತ್ತು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಸಂಭವನೀಯ ಅನಾಹುತ ತಡೆಯಲು ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನೇ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು.
ಘಟನೆಯ ತೀವ್ರತೆಯನ್ನು ಅರಿತ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು, ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮೊಕ್ಕಾಂ ಹೂಡಿ, ಯಾವುದೇ ಅಗ್ನಿ ಅವಘಡ ಸಂಭವಿಸದಂತೆ ಹಾಗೂ ಜನರಿಗೆ ತೊಂದರೆಯಾಗದಂತೆ ಹೈ ಅಲರ್ಟ್ ಆಗಿ ಕಾರ್ಯ ನಿರ್ವಹಿಸಿದರು.
ತಜ್ಞರಿಂದ ಯಶಸ್ವಿ ಕಾರ್ಯಾಚರಣೆ: ಮಂಗಳವಾರ ರಾತ್ರಿಯೇ ಆಗಮಿಸಿದ ತಾಂತ್ರಿಕ ತಜ್ಞರ ತಂಡ, ಸೋರಿಕೆ ಆಗುತ್ತಿದ್ದ ಟ್ಯಾಂಕರ್ ಅನ್ನು ಪರಿಶೀಲಿಸಿ ಅತ್ಯಂತ ಎಚ್ಚರಿಕೆಯಿಂದ ಸೋರಿಕೆಯನ್ನು ತಡೆಗಟ್ಟುವಲ್ಲಿ ಸಫಲರಾಗಿದ್ದಾರೆ. ಟ್ಯಾಂಕರ್‌ನ ಮುಂಭಾಗ ತೀವ್ರವಾಗಿ ಹಾನಿಗೊಳಗಾಗಿರುವುದರಿಂದ ಗ್ಯಾಸ್ ತುಂಬಿದ ಟ್ಯಾಂಕ್ ಅನ್ನು ಸ್ಥಳಾಂತರಿಸಲು ಬದಲಿ ವಾಹನಕ್ಕಾಗಿ ಕಾಯಲಾಗುತ್ತಿದೆ. ಸದ್ಯ ಸ್ಥಳದಲ್ಲಿ ತಜ್ಞರು ಉಪಸ್ಥಿತರಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.
ತಜ್ಞರ ಸಲಹೆ ಮತ್ತು ಹಸಿರು ನಿಶಾನೆಯ ಮೇರೆಗೆ ಬುಧವಾರ ಮುಂಜಾನೆಯಿಂದ ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮತ್ತೆ ಮುಕ್ತಗೊಳಿಸಲಾಗಿದೆ.







