ಭಟ್ಕಳದಲ್ಲಿ ಪ್ರಮುಖ ರೈಲುಗಳನ್ನು ನಿಲುಗಡೆಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಮನವಿ
ಭಟ್ಕಳ: ಭಟ್ಕಳದ ಮೂಲಕ ಮಂಗಳೂರು, ಉಡುಪಿ ಕೇರಳ ಸಂಪರ್ಕಿಸುವ ವಿವಿಧ ಪ್ರಮುಖ ರೈಲುಗಳನ್ನು ಭಟ್ಕಳದಲ್ಲಿ ನಿಲುಗಡೆಗೆ ಆಗ್ರಹಿಸಿ ತಂಝೀಮ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಶನಿವಾರ ಕೇಂದ್ರ ರೈಲು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಭಟ್ಕಳ ತಾಲೂಕು ಒಂದು ಪ್ರಮುಖ ಪ್ರವಾಸಿ ತಾಣವಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ದೇಶದಾದ್ಯಂತ ಪ್ರವಾಸಿಗರು ಭಟ್ಕಳ, ಮುರುಢೇಶ್ವರವನ್ನು ಕಣ್ತುಂಬಿಕೊಳ್ಳಲು ಭಟ್ಕಳ ನಗರಕ್ಕೆ ಬೇಟಿ ನೀಡುತ್ತಾರೆ. ಅಲ್ಲದೆ ಭಟ್ಕಳದ ಬಹುತೇಕರು ಗಲ್ಫ್ ಮತ್ತಿತರ ರಾಷ್ಟ್ರಗಳಲ್ಲಿ ಹಾಗೂ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಾರೆ. ಇಲ್ಲಿನ ಜನರ ಅನುಕೂಲಕ್ಕಾಗಿ ರೈಲು ಸಂಖ್ಯೆ. 19258/19259 - ಕೊಚುವೇಲಿ ಭಾವನಗರ ಎಕ್ಸ್‌ಪ್ರೆಸ್, 16312/16313 - ಕೊಚುವೇಲಿ ಗಾಣಗಾನಗರ ಎಕ್ಸ್‌ಪ್ರೆಸ್, 16633/16634 - ತಿರುವನಂತಪುರ ವೆರಾವಲ್ ಎಕ್ಸ್‌ಪ್ರೆಸ್, 16335/16336 - ನಾಗರ್ ಕೋಯಿಲ್ ಗಾಂಧಿ ಧಾಮ್ ಎಕ್ಸ್‌ಪ್ರೆಸ್, 22148/22149 - ಎರ್ನಾಕುಲಂ ಪುಣೆ ಸೂಪರ್‌ಫಾಸ್ಟ್ (ಎರಡು ವಾರಕ್ಕೊಮ್ಮೆ), 12201/12202 - ಕೊಚುವೇಲಿ ಮುಂಬೈ LTT (ದ್ವಿ-ವಾರ), 12431/12432 - ತಿರುವನಂತಪುರ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ (ತ್ರಿ-ಸಾಪ್ತಾಹಿಕ) ರೈಲುಗಳನ್ನು ಭಟ್ಕಳದಲ್ಲಿ ನಿಲುಗೊಳಿಸುವಂತೆ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಭಟ್ಕಳವು ಒಂದು ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದ್ದು ಬೇರೆ ಬೇರೆ ರಾಜ್ಯದ ಜನರು ಇಲ್ಲಿಗೆ ಬರುತ್ತಾರೆ ಮತ್ತು ಇಲ್ಲಿಯ ಜನರು ಬೇರೆ ರಾಜ್ಯಗಳಿಗೆ ಪ್ರಯಾಣಿಸುತ್ತಾರೆ. ಅಲ್ಲದೆ ನಿತ್ಯವೂ ನೂರಾರು ಮಂದಿ ಉಡುಪಿ, ಮಂಗಳೂರು, ಕೇರಳಕ್ಕೆ ಆರೋಗ್ಯ, ವ್ಯಾಪಾರ, ಶಿಕ್ಷಣದ ಉದ್ದೇಶಕ್ಕಾಗಿ ಪ್ರಯಾಣಿಸುತ್ತಲೇ ಇರುತ್ತಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತಗೊಂಡು ಭಟ್ಕಳ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಉದ್ಯಮಿ ಡಾ.ಅತಿಕುರ‍್ರಹ್ಮಾನ್ ಮುನೀರಿ, ಭಟ್ಕಳ ನಾಗರೀಕ ಹಿತ ರಕ್ಷಣ ವೇದಿಕೆ ಹಾಗೂ ಸದ್ಭಾವನಾ ಮಂಚ್ ನ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ‍್ರಹ್ಮಾನ್ ರುಕ್ನುದ್ದೀನ್, ಜೆ.ಸಿ.ಐ ನ ಅಬ್ದುಲ್ ಜಬ್ಬಾರ್, ಅಬ್ದುಲ್ ಹಸೀಬ್ ಅಸ್ಕೇರಿ, ಜಾವೀದ್ ಮುಕ್ರಿ, ಶಾಹೀನಾ ಶೇಖ್, ಇಕ್ಬಾಲ್ ಸಿಟಿ ಮೆಡಿಕಲ್ ಮತ್ತಿತರರು ಉಪಸ್ಥಿತರಿದ್ದರು.