ಭಟ್ಕಳದಲ್ಲಿ ಚತುಷ್ಪಥ ಕಾಮಗಾರಿ ಪುನರಾರಂಭ ಹಿನ್ನೆಲೆ; ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಹಶೀಲ್ದಾರ್ ಸಭೆ

ಭಟ್ಕಳ: ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಒತ್ತಾಯದ ನಂತರ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಇದೀಗ ಮತ್ತೆ ಪ್ರಾರಂಭಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಈ ಕುರಿತು ಶುಕ್ರವಾರ ತಾಲೂಕು ಆಡಳಿತ ಸೌಧದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಮಳೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಕಾಮಗಾರಿ ತಕ್ಷಣ ಪ್ರಾರಂಭಿಸಬಹುದು. ಆದರೆ ಅದಕ್ಕೂ ಮೊದಲು ತೆಂಗಿನಗುಂಡಿ, ಜಾಲಿ ಕ್ರಾಸ್, ಮಣ್ಕುಳಿ, ಅನ್ಫಾಲ್ ಮಾರ್ಕೆಟ್, ಸಂಶುದ್ದಿನ್ ಸರ್ಕಲ್, ಪಿ.ಎಲ್.ಡಿ. ಬ್ಯಾಂಕ್ ಹಾಗೂ ಉಸ್ಮಾನಿಯ ಕ್ರಾಸ್ ಪ್ರದೇಶಗಳಲ್ಲಿ ಬೀದಿ ದೀಪ ಅಳವಡಿಕೆ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಕೋಟೇಶ್ವರ ಕಾಲೋನಿಯ ಹೆದ್ದಾರಿ ಬಾಧಿತರಿಗೆ ಪರಿಹಾರ ಮೊತ್ತ ಪಾವತಿ, ಹಾಗೂ ಸಾಗರ ರಸ್ತೆಯ ನೀರಿನ ಪೈಪ್‌ಲೈನ್ ಕೊಂಡಿಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬಂದವು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಅವರು “ಕಾಮಗಾರಿ ವೇಳೆ ಯಾವುದೇ ಬದಲಾವಣೆ ಅಥವಾ ಅಡಚಣೆ ಉಂಟಾದರೆ ತಕ್ಷಣ ಆಡಳಿತದ ಗಮನಕ್ಕೆ ತರಬೇಕು,” ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಸಿಪಿಐ ದಿವಾಕರ್ ಅವರು, ಹೆದ್ದಾರಿ ಮಾರ್ಗದಲ್ಲಿನ ಪ್ರಮುಖ ಸ್ಥಳಗಳಲ್ಲಿ ಜೀಬ್ರಾ ಕ್ರಾಸ್ ಅಳವಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ತಹಸೀಲ್ದಾರ್ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಐ.ಆರ್.ಬಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯ ಅಂತ್ಯದಲ್ಲಿ, 15 ದಿನಗಳ ಬಳಿಕ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮುಂದಿನ ಪ್ರಗತಿ ಸಭೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು. ಬಳಿಕ ಅಧಿಕಾರಿಗಳು ಹಾಗೂ ಪೊಲೀಸರು ಶಂಸುದ್ದೀನ್ ಸರ್ಕಲ್ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಐ.ಆರ್.ಬಿ. ಅಧಿಕಾರಿ ಸುದೇಶ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಂಜಪ್ಪ, ಪಿಡಬ್ಲ್ಯೂಡಿ ಹಾಗೂ ಐ.ಆರ್.ಬಿ. ಅಧಿಕಾರಿಗಳು ಉಪಸ್ಥಿತರಿದ್ದರು.







