ಭಟ್ಕಳ | 10 ಕೋ. ರೂ. ವೆಚ್ಚದ ಸರಾಬಿ ನದಿಯ ಸ್ವಚ್ಛತಾ ಕಾರ್ಯ ಜನವರಿಯಿಂದ ಆರಂಭ : ಆನಂದ್ ಕುಮಾರ್

ಭಟ್ಕಳ: ಭಟ್ಕಳದ ಐತಿಹಾಸಿಕ ಸರಾಬಿ ನದಿಯ ಸ್ವಚ್ಛತಾ ಕಾರ್ಯವನ್ನು 2026ರ ಜನವರಿಯಲ್ಲಿ ಆರಂಭಿಸಲಾಗುತ್ತಿದ್ದು, ಮಾರ್ಚ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ನೀರಾವರಿ ಇಲಾಖೆಯ ಹಿರಿಯ ಇಂಜಿನಿಯರ್ ಆನಂದ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಅವರು ಘೌಸಿಯಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್ ಹಾಗೂ ಡಾರಂಟಾ ಭಾಗಗಳಲ್ಲಿ ನದಿಯ ಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳೀಯ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಯೋಜನೆಯ ಕುರಿತು ಅವರ ಅಭಿಪ್ರಾಯಗಳನ್ನು ಕೇಳಿಕೊಂಡರು. ನಂತರ ಪುರಸಭೆ ಮಾಜಿ ಸದಸ್ಯ ಕೈಸರ್ ಮೊಹ್ತಿಷಂ, ಫಯಾಝ್ ಮುಲ್ಲಾ, ಅಲ್ತಾಫ್ ಕರೂರಿ ಸೇರಿದಂತೆ ನಗರಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನದಿ ಶುದ್ಧೀಕರಣ ಯೋಜನೆ ಕುರಿತು ಚರ್ಚಿಸಿದರು.
ಪರಿಶೀಲನೆಯಲ್ಲಿ ಮಜ್ಲಿಸ್ ಇಸ್ಲಾಹ್ ವ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಕೀಬ್ ಎಂ.ಜೆ. ನದ್ವಿ, ಅಡ್ವೊಕೇಟ್ ಸೈಯದ್ ಇಮ್ರಾನ್ ಲಂಕಾ, ಮೌಲವಿ ತೈಮೂರು ಗವಾಯಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಇಂಜಿನಿಯರ್ ಆನಂದ್ ಕುಮಾರ್ ಅವರೊಂದಿಗೆ ಬೆಂಗಳೂರಿನಿಂದ ಹಾಗೂ ಕಾರವಾರದಿಂದ ಬಂದ ಹಿರಿಯ–ಕಿರಿಯ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.





