ಭಟ್ಕಳ | ‘ಆದರ್ಶ ಹಾಸ್ಪಿಟಲ್ ಕನೆಕ್ಟ್'; ಲೈಫ್ ಕೇರ್ ಜೊತೆ ವೈದ್ಯಕೀಯ ಸಂವಾದ

ಭಟ್ಕಳ, ಜ.16: ಲೈಫ್ ಕೇರ್ ಸ್ಪೆಷಾಲಿಟಿ ಹಾಸ್ಪಿಟಲ್, ಭಟ್ಕಳ ಹಾಗೂ ಉಡುಪಿಯ ಆದರ್ಶ ಹಾಸ್ಪಿಟಲ್ ಜಂಟಿ ಆಶ್ರಯದಲ್ಲಿ ‘ಆದರ್ಶ ಹಾಸ್ಪಿಟಲ್ ಕನೆಕ್ಟ್’ ಎಂಬ ವೈದ್ಯಕೀಯ ಸಂವಾದ ಮತ್ತು ಶೈಕ್ಷಣಿಕ ಕಾರ್ಯಕ್ರಮ ರವಿವಾರ ಸಂಜೆ ಇಲ್ಲಿ ನಡೆಯಿತು.
ನಗರದ ರಾಯಲ್ ಓಕ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ವೃತ್ತಿಪರರು ಭಾಗವಹಿಸಿದ್ದರು. ಹಿರಿಯ ಅರಿವಳಿಕೆ ತಜ್ಞ ಡಾ. ಸವಿತಾ ಕಾಮತ್ ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದರು.
ತುರ್ತು ಚಿಕಿತ್ಸಾ ವ್ಯವಸ್ಥೆ, ಸಮಯೋಚಿತ ತಪಾಸಣೆ ಹಾಗೂ ಸಮನ್ವಯಿತ ಚಿಕಿತ್ಸೆಯ ಮಹತ್ವದ ಕುರಿತು ಕಾರ್ಯಕ್ರಮದಲ್ಲಿ ವಿವಿಧ ಉಪನ್ಯಾಸಗಳು ನಡೆದವು. ಹೃದಯ ತಜ್ಞ ಡಾ.ಸುಹಾಸ್ ಜಿ.ಸಿ. ಇಸಿಜಿ ತುರ್ತು ಪರಿಸ್ಥಿತಿಗಳ ಕುರಿತು ಮಾತನಾಡಿ, ಹೃದಯ ಸಂಬಂಧಿ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ತಕ್ಷಣ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಹೇಳಿದರು.
ನೆಫ್ರಾಲಜಿಸ್ಟ್ ಡಾ. ಮೇಘಾ ಪೈ ಗ್ಲೊಮೆರೂಲರ್ ಕಾಯಿಲೆಗಳ ಕುರಿತು ಉಪನ್ಯಾಸ ನೀಡಿ, ಕಿಡ್ನಿ ಆರೋಗ್ಯದ ಮೇಲೆ ಇವುಗಳ ಪರಿಣಾಮ ಹಾಗೂ ಮುಂಚಿತ ನಿರ್ಣಯದ ಮಹತ್ವವನ್ನು ವಿವರಿಸಿದರು. ನ್ಯೂರೋ ಸರ್ಜನ್ ಡಾ. ರಾಜೇಶ್ ನಾಯರ್ ತಲೆಯ ಗಾಯಗಳ ಕುರಿತು ಮಾತನಾಡಿ, ಪ್ರಾಥಮಿಕ ಮೌಲ್ಯಮಾಪನ ಮತ್ತು ನಿರ್ವಹಣೆಯ ಪ್ರಮುಖ ಅಂಶಗಳನ್ನು ವಿವರಿಸಿದರು.
ಲೈಫ್ ಕೇರ್ ಸ್ಪೆಷಾಲಿಟಿ ಹಾಸ್ಪಿಟಲ್ ವೈದ್ಯ ಡಾ.ಕೆನ್ನೆತ್ ಕ್ರಿಸ್ಪಿನ್ ಮಧುಮೇಹಿಗಳಲ್ಲಿ ಕಿಡ್ನಿ ಸುರಕ್ಷೆಗೆ ಸಮಯೋಚಿತ ತಪಾಸಣೆ ಅಗತ್ಯವಿದೆ ಎಂದು ಹೇಳಿದರು. ರೇಡಿಯಾಲಜಿಸ್ಟ್ ಡಾ. ಎಂ.ಡಿ. ನೌಷಾದ್ ಅಕ್ಯೂಟ್ ಸ್ಟ್ರೋಕ್ ಸಂದರ್ಭಗಳಲ್ಲಿ ಇಮೇಜಿಂಗ್ ನ ಪಾತ್ರ ಮತ್ತು ತ್ವರಿತ ನಿರ್ಣಯದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಲೈಫ್ ಕೇರ್ ಹಾಸ್ಪಿಟಲ್, ಭಟ್ಕಳದ ಮೆಡಿಕಲ್ ಡೈರೆಕ್ಟರ್ ಡಾ.ಮುಹಮ್ಮದ್ ನವಾಬ್ ಹಾಗೂ ಆದರ್ಶ ಹಾಸ್ಪಿಟಲ್, ಉಡುಪಿಯ ಮೆಡಿಕಲ್ ಡೈರೆಕ್ಟರ್ ಡಾ. ಜಿ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದು, ವೈದ್ಯರೊಂದಿಗೆ ಸಂವಾದ ನಡೆಸಿದರು.
ಲೈಫ್ ಕೇರ್ ಹಾಸ್ಪಿಟಲ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಝುಬೈರ್ ಕೋಲಾ, ಸಲ್ಮಾನ್ ಜುಬಾಪು, ಸಾಮಾಜಿಕ ಕಾರ್ಯಕರ್ತ ನಝೀರ್ ಕಾಶಿಂಜಿ ಸೇರಿದಂತೆ ಅನೇಕ ಹಿರಿಯ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







