ಭಟ್ಕಳ: ಅಂಜುಮನ್ ಹೈಸ್ಕೂಲ್ ಸಂಯೋಜಕ ಯಾಸೀನ್ ಮೊಹತಿಶಾಮ್ ನಿಧನ

ಭಟ್ಕಳ: ಅಂಜುಮನ್ ಹೈಸ್ಕೂಲ್ನ ಸಂಯೋಜಕರಾಗಿದ್ದ ಯಾಸೀನ್ ಮೊಹತಿಶಾಮ್ (43) ಗುರುವಾರ ತಡ ರಾತ್ರಿ ಹೃದಯಾಘಾತದಿಂದ ನಿಧನರಾದರು.
ರಾತ್ರಿಯ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಕೆಲವೇ ಕ್ಷಣಗಳಲ್ಲಿ ಅವರು ಕೊನೆಯುಸಿರೆಳೆದರು.
ಯಾಸೀನ್ ಮೊಹತಿಶಾಮ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಯುವಕರನ್ನು ಮುನ್ನಡೆಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಭಟ್ಕಳ ಅಕಾಡೆಮಿಯಲ್ಲಿ ಹಲವು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ಸಲ್ಲಿಸಿದ ನಂತರ, ಅವರು ಮೊಹತಿಶಾಮ್ ಅಕಾಡೆಮಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳು, ವಿಶೇಷವಾಗಿ ತಮ್ಮ ಶಿಕ್ಷಣವನ್ನು ಮುಂದುವರಿಸುವಲ್ಲಿ ತೊಡಕು ಅನುಭವಿಸುತ್ತಿದ್ದವರು, ಅವರ ಮಾರ್ಗದರ್ಶನವನ್ನು ಪಡೆದರು. ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಸೇವೆಯು ಎಂದಿಗೂ ಸ್ಮರಣೀಯ.
ಕಳೆದ ಕೆಲವು ವರ್ಷಗಳಿಂದ ಯಾಸೀನ್ ಅವರು ಅಂಜುಮನ್ ಹೈಸ್ಕೂಲ್ ಗಳ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದರು. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೆ ಆಧುನಿಕ ಶೈಕ್ಷಣಿಕ ವಿಧಾನಗಳನ್ನು ಪರಿಚಯಿಸುವಲ್ಲಿ ಅವರ ಪ್ರಯತ್ನಗಳು ಗಮನಾರ್ಹವಾಗಿವೆ.
ಯಾಸೀನ್ ಅವರು ಭಟ್ಕಳದ ಸನ್ ಶೈನ್ ಕ್ರೀಡಾ ಕೇಂದ್ರದ ಸಕ್ರಿಯ ಸದಸ್ಯರಾಗಿದ್ದರು. ಅಂಜುಮನ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸೇರಿದಂತೆ ಭಟ್ಕಳದ ವಿವಿಧ ಶಿಕ್ಷಣ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಯಾಸೀನ್ ಸರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮೃತರು ಪತ್ನಿ, 3ಮಕ್ಕಳು ಹಾಗೂಅಪಾರ ವಿದ್ಯಾರ್ಥಿ ಬಳಗವನ್ನು ಅಗಲಿದ್ದಾರೆ.







