ಭಟ್ಕಳ: ಎಸ್‌ಐಆರ್ ಮತ್ತು ಮತದಾರ ನಕ್ಷೆಕರಣ ಕುರಿತು ಜಾಗೃತಿ ಸಮ್ಮೇಳನ

ಭಟ್ಕಳ: ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ವತಿಯಿಂದ ನವಾಯತ್ ಕಾಲನಿಯಲ್ಲಿ ಎಸ್‌ಐಆರ್ (Special Intensive Revision) ಹಾಗೂ ಮತದಾರ ನಕ್ಷೆಕರಣ ಕುರಿತ ಜಾಗೃತಿ ಸಮ್ಮೇಳನ ಆಯೋಜಿಸಲಾಯಿತು.
ಈ ಸಂದರ್ಭ ದಾಖಲೆ ಸಂಗ್ರಹ, ಪರಿಶೀಲನಾ ಪ್ರಕ್ರಿಯೆಗಳಿಗೆ ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ, ತಂಝೀಮ್ ಮೇಲ್ವಿಚಾರಣೆಯಡಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಿಸಲಾಯಿತು.
ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮುಬಾಶಿರ್ ಹುಸೇನ್ ಹಲ್ಲಾರೆ, ಮುರ್ಡೇಶ್ವರ ಮತ್ತು ಮಾಂಕಿ ಸೇರಿದಂತೆ ವಿವಿಧ ಕ್ರೀಡಾ ಕೇಂದ್ರಗಳ ಸಂಯೋಜಕರು ಹಾಗೂ ಭಾಗವಹಿಸಿದ್ದವ ರಿಗೆ ಎಸ್‌ಐಆರ್ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು. ನೋಟು ಅಮಾನ್ಯೀಕರಣ, ಸಿಎಎ–ಎನ್‌ಆರ್‌ಸಿ ಹಾಗೂ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಕುರಿತ ಚರ್ಚೆಗಳ ನಂತರ ಇದೀಗ ಎಸ್‌ಐಆರ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಅಳಿಸುವ ಪ್ರಯತ್ನಗಳು ನಡೆಯುತ್ತಿರುವ ಕುರಿತು ಅವರು ಎಚ್ಚರಿಸಿದರು. ಯುವ ನಾಗರಿಕರು ತಮ್ಮ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿಕೊಂಡು, ತಕ್ಷಣವೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿನ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಎಸ್‌ಐಆರ್ ಪರಿಶೀಲನೆಗೆ ಪ್ರಸ್ತುತ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಮಾನ್ಯ ದಾಖಲೆಗಳಾಗಿ ಪರಿಗಣಿಸಲಾಗುವುದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು. ಇದೇ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮುರ್ಡೇಶ್ವರ ಮತ್ತು ಮಾಂಕಿಯಲ್ಲೂ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ವಕೀಲ ಹಾಗೂ ಫೆಡರೇಶನ್ ಉಪಾಧ್ಯಕ್ಷ ಇಮ್ರಾನ್ ಲಂಕಾ, ಎಸ್‌ಐಆರ್‌ನ ಕಾನೂನಾತ್ಮಕ ಅಂಶಗಳು, ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳು ಹಾಗೂ ಮತದಾರ ಪರಿಶೀಲನೆ ವೇಳೆ ಎದುರಾಗುವ ಸಾಮಾನ್ಯ ಸಮಸ್ಯೆಗಳ ಕುರಿತು ವಿವರಿಸಿದರು. ಸಮಯಕ್ಕೆ ಸರಿಯಾಗಿ ದಾಖಲೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ನಿಜವಾದ ಮತದಾರರ ಹೆಸರುಗಳೂ ಮತದಾರರ ಪಟ್ಟಿಯಿಂದ ಕೈ ತಪ್ಪುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮವು ಮೌಲವಿ ಸಯ್ಯದ್ ಸಾಲಿಕ್ ಬರ್ಮಾವರ್ ನದ್ವಿ ಅವರ ಪವಿತ್ರ ಕುರ್‌ಆನ್ ಪಠಣದೊಂದಿಗೆ ಆರಂಭ ಗೊಂಡು, ಫೆಡರೇಶನ್ ಅಧ್ಯಕ್ಷ ಮೌಲಾನಾ ವಾಸಿಯುಲ್ಲಾ ಡಿಎಫ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯವಾಯಿತು. ವಕೀಲ ಅಫಾಕ್ ಕೋಲಾ, ಸಾಮಾಜಿಕ ಸಮಿತಿ ಕಾರ್ಯದರ್ಶಿ ಜಹೀರ್ ಶೇಖ್ ಸೇರಿದಂತೆ ಫೆಡರೇಶನ್‌ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.







