ಭಟ್ಕಳ: ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆ

ಭಟ್ಕಳ: ತಾಲೂಕಿನ ಬೆಳಕೆ ಗ್ರಾಮದ ಕಂಚಿಕೇರಿಯ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾದ ಒಂದು ದಿನದ ಬಳಿಕ ಮನೆಯ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಗಾಯತ್ರಿ ನಾಗರಾಜ ನಾಯ್ಕ (19) ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಸಿಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್) ವ್ಯಾಸಂಗ ಮಾಡುತ್ತಿದ್ದರು.
ಗಾಯತ್ರಿ ಗುರುವಾರದಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಕುಟುಂಬದವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರು.
ಶುಕ್ರವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಅವರ ಮನೆಯ ಸಮೀಪದ ಬಾವಿಯಲ್ಲಿ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದರೂ, ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




