ಭಟ್ಕಳಕ್ಕೆ ಬಾಂಬ್ ಬೆದರಿಕೆ ಪ್ರಕರಣ: ತಮಿಳುನಾಡು ಮೂಲದ ಆರೋಪಿ ಕಣ್ಣನ್ ಗುರುಸ್ವಾಮಿ ಬಂಧನ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಕಳುಹಿಸಿದ್ದ ಆರೋಪಿಯನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಆರೋಪಿ ಕಣ್ಣನ್ ಗುರುಸ್ವಾಮಿ ಎಂಬಾತನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ನಾರಾಯಣ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 10ರಂದು ಬೆಳಿಗ್ಗೆ 7:22ಕ್ಕೆ kannnannandik@gmail.com ಎಂಬ ಇ-ಮೇಲ್ ವಿಳಾಸದಿಂದ ಭಟ್ಕಳ ಶಹರ ಠಾಣೆಯ bhatkaltownkwr@ksp.gov.in ಗೆ ಎರಡು ಬಾರಿ ಬೆದರಿಕೆಯ ಸಂದೇಶ ರವಾನಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ಚುರುಕುಗೊಳಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಆರೋಪಿ ಕಣ್ಣನ್ ಗುರುಸ್ವಾಮಿ ಈ ಹಿಂದೆಯೂ ಮೈಸೂರು, ಬಳ್ಳಾರಿ ಸೇರಿದಂತೆ ಹಲವು ಕಡೆಗಳಲ್ಲಿ ಇಂತಹ ಬಾಂಬ್ ಬೆದರಿಕೆಗಳನ್ನು ಹಾಕಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿಯ ಕೈವಾಡವಿರುವ ಶಂಕೆಯಿದ್ದು, ಆತನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಯನ್ನು ಕಾರವಾರಕ್ಕೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆಯಿಂದ ಭಟ್ಕಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತಾದರೂ, ಪೊಲೀಸರ ಕಾರ್ಯಾಚರಣೆಯಿಂದ ಸಾರ್ವಜನಿಕರಲ್ಲಿ ನೆಮ್ಮದಿ ಉಂಟು ಮಾಡಿದೆ.







