ಭಟ್ಕಳ | ಮುರ್ಡೇಶ್ವರ ಬಳಿ ಬಸ್–ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

ಭಟ್ಕಳ: ಭಟ್ಕಳ ತಾಲ್ಲೂಕಿನ ಮುರ್ಡೇಶ್ವರ ಬಸ್ತಿ ಮಕ್ಕಿ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೃತರನ್ನು ಸಮೀಪದ ತೆರ್ನಮಕ್ಕಿ ನಿವಾಸಿ ಜೋಸೆಫ್ ಡಿ’ಸೋಜಾ (40) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಸುಮಾರು ಎಂಟು ಗಂಟೆ ಸುಮಾರಿಗೆ ಭಟ್ಕಳದಿಂದ ಹೊನ್ನಾವರ ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್, ರಸ್ತೆ ದಾಟುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢೀಕ್ಕಿಯ ತೀವ್ರತೆಗೆ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಮರ್ಡೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಹನುಮಂತ ಬಿರಾದರ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಕುರಿತು ಮರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





