ಭಟ್ಕಳ: ಕಾರು–ಸ್ಕೂಟರ್ ಢಿಕ್ಕಿ; ಇಬ್ಬರಿಗೆ ಗಾಯ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ–66ರ ನವಾಯತ್ ಕಾಲನಿಯ ಸಿಟಿ ಲೈಟ್ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ ನಡೆದ ಕಾರು–ಸ್ಕೂಟರ್ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಮದೀನಾ ಕಾಲನಿಯ ನಿವಾಸಿ ಸೈಯದ್ ಉಮರ್ ರಶಾದ್ ಶೇಖ್ (20) ಹಾಗೂ ಶಿರೂರು ಮೂಲದವರಾದ ಪ್ರಸ್ತುತ ಭಟ್ಕಳದ ಅಜಾದ್ ನಗರದಲ್ಲಿ ವಾಸವಿರುವ ತೌಸೀಫ್ (40) ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಮೊದಲು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಬುಧವಾರ ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ಸ್ಕೂಟರ್ ಸಿಟಿ ಲೈಟ್ ಕ್ರಾಸ್‌ನಿಂದ ಶಮ್ಸುದ್ದೀನ್ ವೃತ್ತದತ್ತ ಸಾಗುತ್ತಿದ್ದ ವೇಳೆ, ವಿರುದ್ಧ ದಿಕ್ಕಿನಿಂದ ಉಡುಪಿ–ಸಿರ್ಸಿ ಮಾರ್ಗವಾಗಿ ಅತಿವೇಗದಲ್ಲಿ ಬಂದ ಕಾರು ಲಾರಿಯನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಯಿಂದ ಸ್ಕೂಟರ್ ಕೆಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಅಪಘಾತದ ಬಳಿಕ ಸ್ಥಳೀಯರು ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಭಟ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.







