ಭಟ್ಕಳ: ಸಮುದ್ರ ತೀರಕ್ಕೆ ತೇಲಿಬಂದ ಕಂಟೈನರ್ ಹಡಗಿನ ಭಾಗ; ಕರಾವಳಿ ಕಾವಲು ಪಡೆಯಿಂದ ಪರಿಶೀಲನೆ

ಭಟ್ಕಳ: ಕಂಟೈನರ್ ಹಡಗಿನ ಭಾರೀ ಗಾತ್ರದ ಭಾಗವೊಂದು ಸಮುದ್ರ ದಡಕ್ಕೆ ಬಂದು ಬಿದ್ದ ಘಟನೆ ಮಂಗಳವಾರ (ಜೂನ್ 17) ನಸುಕಿನ ಜಾವ ತಾಲೂಕಿನ ಜಾಲಿ ಕಡಲ ಕಿನಾರೆಯಲ್ಲಿ ಸಂಭವಿಸಿದೆ. ಸುಮಾರು 70 ಮೀಟರ್ ಉದ್ದದ ಈ ಕಂಟೈನರ್ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.
ಕರಾವಳಿ ಕಾವಲು ಪಡೆಯ ಅಧಿಕಾರಿಗಳ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಕಂಟೈನರ್ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ಸಂಬಂಧಿಸಿದ್ದು ಎಂದು ದೃಢಪಟ್ಟಿದೆ. ಭಾರೀ ಗಾಳಿಯಿಂದಾಗಿ ಹಡಗಿನ ಆ್ಯಂಕರ್ ಕಳಚಿಕೊಂಡು ಕಡಲತೀರಕ್ಕೆ ತೇಲಿಬಂದಿರುವ ಸಾಧ್ಯತೆಯಿದೆ. "ಗಾಳಿಯ ಒತ್ತಡ ಮತ್ತು ಸಮುದ್ರದ ರಭಸವೇ ಈ ಘಟನೆಗೆ ಕಾರಣವಿರಬಹುದು. ಆದರೆ, ನಿಖರವಾದ ಕಾರಣವನ್ನು ತಿಳಿಯಲು ಮತ್ತಷ್ಟು ತನಿಖೆ ನಡೆಸಬೇಕಿದೆ," ಎಂದು ಕರಾವಳಿ ಕಾವಲು ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಟೈನರ್ ನ ಒಳಗೆ ಏನಾದರೂ ಸರಕು ಇದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇದು ಕಡಲತೀರದ ಸುರಕ್ಷತೆ ಮತ್ತು ಪರಿಸರಕ್ಕೆ ಯಾವುದೇ ತೊಂದರೆ ಉಂಟುಮಾಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕೊಚ್ಚಿನ್ ಶಿಪ್‌ಯಾರ್ಡ್‌ನಿಂದ ತಂಡವೊಂದು ಶೀಘ್ರವೇ ಸ್ಥಳಕ್ಕೆ ಆಗಮಿಸಿ ಕಂಟೈನರ್ ನ ತಪಾಸಣೆ ಮತ್ತು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಕಂಟೈನರ್ ತೇಲಿ ಬಂದು ನಿಂತಿದ್ದನ್ನು ನೋಡಲು ನೂರಾರು ಜನರು ಜಾಲಿ ಕೋಡಿ ಸಮುದ್ರ ತೀರಕ್ಕೆ ಬರುತ್ತಿದ್ದು ಊರಿನಲ್ಲಿ ಎಲ್ಲಾ ಇದರದ್ದೇ ಸುದ್ದಿಯಾಗಿದೆ. ಕರಾವಳಿ ಕಾವಲು ಪಡೆಯ ಪೊಲೀಸರು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ಮೀನುಗಾರರ ಪ್ರಕಾರ, ಇಂತಹ ಘಟನೆಗಳು ಅಪರೂಪವಾಗಿ ಸಂಭವಿಸುತ್ತವೆ. "ಕಡಲಲ್ಲಿ ಗಾಳಿಯ ವೇಗ ಹೆಚ್ಚಾದಾಗ ಇಂಥ ಘಟನೆಗಳು ಆಗಾಗ ಸಂಭವಿಸುತ್ತವೆ. ಆದರೆ, ಇಷ್ಟು ದೊಡ್ಡ ಕಂಟೈನರ್ ದಡಕ್ಕೆ ಬಂದಿರುವುದು ಆಶ್ಚರ್ಯಕರ," ಎಂದು ತಿಳಿಸಿದ್ದಾರೆ.
ಕರಾವಳಿ ಕಾವಲು ಪಡೆಯು ಸ್ಥಳದಲ್ಲಿ ಭದ್ರತೆಯನ್ನು ಒದಗಿಸಿದ್ದು, ಕಂಟೈನರ್ ನ ಸುತ್ತ ಜನರ ಓಡಾಟವನ್ನು ನಿಯಂತ್ರಿಸುತ್ತಿದೆ. ಈ ಘಟನೆಯಿಂದ ಕಡಲತೀರದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಈ ಕಂಟೈನರ್ ನ ಮೂಲ ಮತ್ತು ಘಟನೆಯ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.







