ಭಟ್ಕಳ | ಹೆರಾಡಿ ಕ್ರಾಸ್‌ನಲ್ಲಿ ಬಸ್ ನಿಲುಗಡೆಗೆ ಒತ್ತಾಯ

ಭಟ್ಕಳ, ನ.21: ಕಾಯ್ಕಿಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆರಾಡಿ ಕ್ರಾಸ್‌ನಲ್ಲಿ ಬಸ್ ನಿಲುಗಡೆ ಪುನಃ ಆರಂಭಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಓWಏಖಖಿಅ) ಭಟ್ಕಳ ಘಟಕಕ್ಕೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಹೆರಾಡಿ ಕ್ರಾಸ್ ಪ್ರದೇಶದಲ್ಲಿ ಶಾಲೆ, ಪಂಚಾಯತ್, ಬ್ಯಾಂಕ್ ಸೇರಿದಂತೆ ಹಲವು ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ದಿನವೂ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಮಾರ್ಗವಾಗಿ ಸಂಚಾರ ಮಾಡುತ್ತಾರೆ. ಹಿಂದೆ ಸರಕಾರಿ ಬಸ್‌ಗಳು ಇಲ್ಲಿ ನಿಲ್ಲುತ್ತಿದ್ದರೂ, ಇತ್ತೀಚೆಗೆ ಸ್ಥಳೀಯ ಬಸ್‌ಗಳು ನಿಲುಗಡೆ ಮಾಡದೇ ಹೋಗುತ್ತಿರುವುದರಿಂದ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಈ ಸ್ಥಳದಲ್ಲಿ ಬಸ್ ನಿಲ್ಲಿಸುವುದು ಅತ್ಯಂತ ಅಗತ್ಯವಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಘಟಕದ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಘಟಕದ ವ್ಯವಸ್ಥಾಪಕರ ಅನುಪಸ್ಥಿತಿಯಲ್ಲಿ ಸಿಬ್ಬಂದಿ ಮನವಿಯನ್ನು ಸ್ವೀಕರಿಸಿದರು.
ಮನವಿ ಸಲ್ಲಿಸುವ ವೇಳೆ ಗಣೇಶ ನಾಯ್ಕ, ವಿಷ್ಣು ನಾಯ್ಕ, ದಿಲೀಪ ನಾಯ್ಕ, ಮಿಥುನ ನಾಯ್ಕ, ಅಶೋಕ ನಾಯ್ಕ ಮತ್ತು ಸುಬ್ರಹ್ಮಣ್ಯ ನಾಯ್ಕ ಉಪಸ್ಥಿತರಿದ್ದರು.





