ಭಟ್ಕಳ: ಅಮೃತ್ 2.0 ಕಾಮಗಾರಿಯಿಂದ ಅಗೆದ ರಸ್ತೆಗಳ ತ್ವರಿತ ದುರಸ್ತಿಗೆ ಆಗ್ರಹ

ಭಟ್ಕಳ: ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಕೆಗಾಗಿ ಅಗೆದ ರಸ್ತೆಗಳನ್ನು ಶೀಘ್ರ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಪುರಸಭಾ ಮಾಜಿ ಸದಸ್ಯ ಫಯಾಝ್ ಎಚ್. ಮುಲ್ಲಾ ಅವರು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ವಾರ್ಡ್ ನಂ. 20 ಹಾಗೂ 21ರ ವ್ಯಾಪ್ತಿಯ ಶಬ್ಬೀರ್ ಸ್ಟ್ರೀಟ್, ಶೌಕತ್ ಅಲಿ ರಸ್ತೆ, ತೆಕಿಯಾ ಸ್ಟ್ರೀಟ್, ಗೌಸಿಯಾ ಸ್ಟ್ರೀಟ್ ಮತ್ತು ಫಾರೂಕಿ ಸ್ಟ್ರೀಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಪೈಪ್ ಅಳವಡಿಕೆ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿಗಾಗಿ ಈ ಹಿಂದೆ ಸುಸ್ಥಿತಿಯಲ್ಲಿದ್ದ ಇಂಟರ್ ಲಾಕ್ ಹಾಗೂ ಡಾಂಬರು ರಸ್ತೆಗಳನ್ನು ಅಗೆಯಲಾಗಿದ್ದು, ಪೈಪ್ ಅಳವಡಿಕೆ ಬಳಿಕ ರಸ್ತೆಗಳನ್ನು ಸಮರ್ಪಕವಾಗಿ ಮರುಸ್ಥಾಪನೆ ಮಾಡದೆ ಬಿಟ್ಟಿರುವುದಾಗಿ ಅವರು ದೂರಿದ್ದಾರೆ.
ರಸ್ತೆಗಳನ್ನು ಯಥಾಸ್ಥಿತಿಗೆ ತರದ ಪರಿಣಾಮ ಹಲವೆಡೆ ದೊಡ್ಡ ಗುಂಡಿಗಳು ಉಂಟಾಗಿದ್ದು, ಧೂಳಿನ ಸಮಸ್ಯೆಯೂ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮುಂಬರುವ ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ನಿಂತು ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇರುವುದರಿಂದ, ಮಳೆ ಆರಂಭವಾಗುವ ಮುನ್ನವೇ ಸಂಬಂಧಪಟ್ಟ ಇಲಾಖೆ ಇಂಟರ್ ಲಾಕ್, ಡಾಂಬರು ಅಥವಾ ಕಾಂಕ್ರಿಟ್ ಮೂಲಕ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಫಯಾಝ್ ಎಚ್. ಮುಲ್ಲಾ ಆಗ್ರಹಿಸಿದ್ದಾರೆ.






