ಭಟ್ಕಳ ತಹಶೀಲ್ದಾರ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಭಟ್ಕಳ: ಇಲ್ಲಿನ ತಾಲೂಕು ಆಡಳಿತ ಸೌಧ (ಮಿನಿ ವಿಧಾನ ಸೌಧ) ದಲ್ಲಿರುವ ಭಟ್ಕಳ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಬೆಳಿಗ್ಗೆ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಇರುವ ಇಮೇಲ್ ಬಂದಿದ್ದು, ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟಾಗಿದೆ.
ಬೆಳಿಗ್ಗೆ ಸುಮಾರು 7.25ರ ವೇಳೆಗೆ ತಹಶೀಲ್ದಾರ್ ಕಚೇರಿಯ ಅಧಿಕೃತ ಇಮೇಲ್‌ಗೆ ಈ ಆತಂಕಕಾರಿ ಸಂದೇಶ ರವಾನೆಯಾಗಿದ್ದು, ಕಚೇರಿ ಆವರಣದಲ್ಲಿ ಶೀಘ್ರದಲ್ಲೇ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಮೇಲ್ ನಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಕುರಿತಂತೆ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಯನ್ನು ಪುಷ್ಟೀಕರಿಸಿದ್ದಾರೆ
ಇಮೇಲ್‌ನಲ್ಲಿ ಏನಿದೆ? :
ಕನ್ನಡದಲ್ಲಿ ಬರೆಯಲ್ಪಟ್ಟಿರುವ ಈ ಇಮೇಲ್‌ನಲ್ಲಿ “ತಮಿಳರು ಹಾಗೂ ಪಾಕಿಸ್ತಾನಿಗಳ ಸೇಡು” ಎಂಬ ಉಲ್ಲೇಖಗಳಿದ್ದು, ತಕ್ಷಣ ಎಲ್ಲರನ್ನು ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ‘gaineramesh@outlook.com’ ಎಂಬ ಇಮೇಲ್ ಐಡಿಯಿಂದ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, ಇಮೇಲ್‌ನ ಒಳವಿಷಯದಲ್ಲಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ಆರೋಪಾತ್ಮಕ ಬರಹಗಳು, ಕೆಲವು ರಾಜಕೀಯ ತಂತ್ರಜ್ಞರ ಹೆಸರುಗಳ ಉಲ್ಲೇಖ, ಮಾಧ್ಯಮ ಹಾಗೂ ಸಾರ್ವಜನಿಕರ ಮೇಲೆ ನಿಗಾವಹಿಸಲಾಗಿದೆ ಎಂಬ ಆರೋಪಗಳು ಸೇರಿವೆ. ಅನಾಥಾಶ್ರಮಗಳಲ್ಲಿನ ಹೆಣ್ಣುಮಕ್ಕಳ ಶೋಷಣೆ ಕುರಿತ ಗಂಭೀರ ಆರೋಪಗಳನ್ನೂ ಈ ಮೇಲ್ ಒಳಗೊಂಡಿದೆ.
ಪೊಲೀಸ್ ಬಿಗಿ ಬಂದೋಬಸ್ತ್ :
ಬಾಂಬ್ ಬೆದರಿಕೆ ಮಾಹಿತಿ ದೊರೆಯುತ್ತಿದ್ದಂತೆ ತಕ್ಷಣ ತಹಶೀಲ್ದಾರ್ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ಸಂಪೂರ್ಣ ತಪಾಸಣೆ ನಡೆಸಲಾಗುತ್ತಿದೆ. ಇದುವರೆಗೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.







