Bhatkal | ನಾಯಿ ವಿಚಾರಕ್ಕೆ ಜಗಳ : ಬಿಯರ್ ಬಾಟಲಿಯಿಂದ ಹಲ್ಲೆ, ವ್ಯಕ್ತಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ
ಭಟ್ಕಳ: ನಾಯಿಯನ್ನು ಶೆಡ್ನೊಳಗೆ ಕರೆತಂದ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ. ಈ ಸಂಬಂಧ ಸಾಗರ ತಾಲ್ಲೂಕಿನ ದಿನೇಶ್ ಪರಶು ಮರಾಠ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ :
ಪಟ್ಟಣದ ಫೋರ್ ಸೀಸನ್ ಬಾರ್ ಅಂಡ್ ರೆಸ್ಟೋರೆಂಟ್ ಪಕ್ಕದ ಶೆಡ್ನಲ್ಲಿ ಮೈನುದ್ದೀನ್ ಗೌಸ್ ಮೊಹಿದ್ದಿನ್ ಯಾದವಾಡ (44) ಮಧ್ಯಾಹ್ನ ಮದ್ಯಪಾನ ಮಾಡುತ್ತಿದ್ದ ವೇಳೆ, ದಿನೇಶ್ ನಾಯಿಯನ್ನು ಕರೆದುಕೊಂಡು ಶೆಡ್ನೊಳಗೆ ಬಂದಿದ್ದಾನೆ. ನಾಯಿಯನ್ನು ಹೊರಗೆ ಕರೆದೊಯ್ಯುವಂತೆ ಮೈನುದ್ದೀನ್ ಸೂಚಿಸಿದ್ದರಿಂದ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.
ವಾಗ್ವಾದ ತೀವ್ರಗೊಂಡ ವೇಳೆ ದಿನೇಶ್ ತನ್ನ ಕೈಯಲ್ಲಿದ್ದ ಖಾಲಿ ಬಿಯರ್ ಬಾಟಲಿಯಿಂದ ಮೈನುದ್ದೀನ್ ಅವರ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಬಳಿಕ ಒಡೆದ ಬಾಟಲಿಯಿಂದ ಎದೆಗೆ ಚುಚ್ಚಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಕೈ ಅಡ್ಡಹಿಡಿದ ಮೈನುದ್ದೀನ್ ಅವರ ಎಡ ಮೊಣಕೈಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಭಟ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ನಾಯ್ಕ ಹಾಗೂ ಸಿಬ್ಬಂದಿ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಾಯದ ತೀವ್ರತೆ ಹೆಚ್ಚಿದ್ದರಿಂದ ಬಳಿಕ ಉಡುಪಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಗಾಯಾಳುವಿನ ಪತ್ನಿ ಮುಬೀನಾ ಬಾನು ನೀಡಿದ ದೂರಿನ ಮೇರೆಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದಿನೇಶ್ ಪರಶು ಮರಾಠನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.






