ಭಟ್ಕಳ: ಮಾದಕ ದ್ರವ್ಯ ಸೇವನೆ ಪ್ರಕರಣ ; ಐದು ಮಂದಿ ಆರೋಪಿಗಳ ಬಂಧನ

ಭಟ್ಕಳ: ಮಾದಕ ದ್ರವ್ಯ ವಿರುದ್ಧ ಭಟ್ಕಳ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಮಾದಕ ಪದಾರ್ಥ ಸೇವನೆಗೆ ಸಂಬಂಧಿಸಿದಂತೆ ಎನ್.ಡಿ.ಪಿ.ಎಸ್ (NDPS) ಕಾಯ್ದೆಯಡಿ ಪ್ರತ್ಯೇಕ ಕಡೆ ದಾಳಿ ನಡೆಸಿ ಒಟ್ಟು ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರ ಪೈಕಿ ನಾಲ್ವರನ್ನು ಭಟ್ಕಳ ಶಹರ ಠಾಣೆ ಪೊಲೀಸರು ಹಾಗೂ ಒಬ್ಬನನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗ್ರಾಮೀಣ ಠಾಣೆ ಕಾರ್ಯಾಚರಣೆ: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಫಿರ್ದೋಸ್‌ನಗರದ ಕೋಳಿ ಫಾರ್ಮ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಮಲಿನ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ತಗ್ಗರಗೋಡ ನಿವಾಸಿ ಸಲೀಂ (25) ಎಂಬಾತನನ್ನು ಪಿ.ಎಸ್.ಐ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದ ಪೊಲೀಸ್ ತಂಡ ಜುಲೈ 16ರಂದು ವಶಕ್ಕೆ ಪಡೆದಿತ್ತು. ಆತನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಶಹರ ಠಾಣೆ ಕಾರ್ಯಾಚರಣೆ: ಇತ್ತ ಭಟ್ಕಳ ಶಹರ ಠಾಣೆಯ ಪಿ.ಎಸ್.ಐ ನವೀನ್ ಎಸ್. ನಾಯ್ಕ್ ನೇತೃತ್ವದಲ್ಲಿ ನಗರದಾದ್ಯಂತ ಮಿಂಚಿನ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ತಕಿಯಾ ಸ್ಟ್ರೀಟ್ ನಿವಾಸಿ ಅನಸ್ (18) ಹಾಗೂ ಖಾಜಿಯಾ ಸ್ಟ್ರೀಟ್ ನಿವಾಸಿ ಅಬ್ದುಲ್ ಆಲಿಂ (42) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಬ್ಬರ ವೈದ್ಯಕೀಯ ಪರೀಕ್ಷೆಯಲ್ಲೂ ಮಾದಕ ದ್ರವ್ಯ ಸೇವನೆ ಮಾಡಿರುವುದು ಪಕ್ಕಾ ಆಗಿದ್ದು, ಕಾನೂನು ರೀತ್ಯಾ ಮುಖದ್ದಮೆ ದಾಖಲಿಸಿಕೊಳ್ಳಲಾಗಿದೆ.
ಇದೇ ವಿಶೇಷ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಪಟ್ಟಣದ ವಿವಿಧೆಡೆ ಅಮಲಿನ ಸ್ಥಿತಿಯಲ್ಲಿದ್ದ ಇನ್ನಿಬ್ಬರು ಯುವಕರನ್ನು ಕೂಡ ಶಹರ ಪೊಲೀಸರು ವಶಕ್ಕೆ ಪಡೆದಿದ್ದು, ಅವರ ದೇಹದಲ್ಲೂ ಮಾದಕ ದ್ರವ್ಯದ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ಮಾರಾಟಗಾರರು ಹಾಗೂ ಸೇವಿಸುವವರ ವಿರುದ್ಧ ಗಸ್ತು ಮತ್ತು ದಾಳಿ ನಿರಂತರವಾಗಿ ಮುಂದುವರಿಯಲಿದೆ ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.






