ಭಟ್ಕಳದಲ್ಲಿ ಚತುಷ್ಪಥ ಮಾರ್ಗ ವಿಸ್ತರಣೆ ಕಾಮಗಾರಿ ಅಪೂರ್ಣ: ತುರ್ತು ಕ್ರಮಕ್ಕೆ ಯು.ಟಿ.ಖಾದರ್ ಗೆ ಮನವಿ

ಭಟ್ಕಳ: ಭಟ್ಕಳದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಮಾರ್ಗ ವಿಸ್ತರಣೆ ಕಾಮಗಾರಿಯು ಅಪೂರ್ಣ, ಕಳಪೆ ಗುಣಮಟ್ಟದ ಮತ್ತು ಸರ್ವಿಸ್ ರಸ್ತೆ ಇಲ್ಲದ ರೀತಿಯಲ್ಲಿ ನಡೆಯುತ್ತಿರುವುದಕ್ಕೆ ದುಬೈ ಹಾಗೂ ಯುಎಇಯಲ್ಲಿ ನೆಲೆಸಿರುವ ಭಟ್ಕಳ ಮೂಲದ ಅನಿವಾಸಿ ಭಾರತೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರು ದುಬೈ ಭೇಟಿ ನೀಡಿದ ಸಂದರ್ಭದಲ್ಲಿ, ಸ್ಥಳೀಯ ಭಟ್ಕಳ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಭಟ್ಕಳದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು ಹಾಗೂ ರಸ್ತೆ ಅಪಘಾತಗಳನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಸಭೆಯು ಭಟ್ಕಳ ಮುಸ್ಲಿಂ ಜಮಾಅತ್ ದುಬೈ ಅಧ್ಯಕ್ಷ ಶಹರಿಯಾರ್ ಖತೀಬ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ನಡೆಯಿತು. ಭಟ್ಕಳ ಮಜ್ಲಿಸ್-ಎ-ಇಸ್ಲಾಹ್-ಒ-ತಂಝೀಮ್ ಉಪಾಧ್ಯಕ್ಷ ಹಾಗೂ ಭಟ್ಕಳ ಮುಸ್ಲಿಂ ಖಲೀಜ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಅತೀಕುರ್ ರಹ್ಮಾನ್ ಮುನೀರಿ, ಬಿಎಂಜೆಡಿ ಪ್ರಧಾನ ಕಾರ್ಯದರ್ಶಿ ಜೈಲಾನಿ ಮೊಹತೆಶಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ವೇಳೆ ಪ್ರತಿನಿಧಿಗಳು ಮಾತನಾಡಿ, ಭಟ್ಕಳದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ 12 ವರ್ಷಗಳಿಂದ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಹಲವು ಭಾಗಗಳಲ್ಲಿ ಕಾಮಗಾರಿ ಮಧ್ಯೆ ನಿಂತಿರುವುದರಿಂದ ಅಪಘಾತಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೇಳಿದರು.
ಮಂಗಳೂರು–ಗೋವಾ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯು ಭಟ್ಕಳ ಪಟ್ಟಣದ ಮಧ್ಯಭಾಗದಿಂದ ಸರ್ವಿಸ್ ರಸ್ತೆ ಇಲ್ಲದೆ ಸಾಗಿದರೆ ಅಪಘಾತಗಳು ಇನ್ನಷ್ಟು ಹೆಚ್ಚಾಗುವುದು ಖಚಿತ. ಸರ್ವೀಸ್ ರಸ್ತೆ ಇಲ್ಲದ ಕಾರಣದಿಂದ ಸ್ಥಳೀಯರು ನಿತ್ಯ ಸಂಚಾರಕ್ಕಾಗಿ ನೇರವಾಗಿ ಹೆದ್ದಾರಿಯನ್ನೇ ಬಳಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅತೀಕುರ್ ರಹ್ಮಾನ್ ಮುನೀರಿ ಮಾತನಾಡಿ, ಭಟ್ಕಳದಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು ಅಥವಾ ಕನಿಷ್ಠ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್, ಬ್ಲಡ್ ಬ್ಯಾಂಕ್ ಮತ್ತು ಡಯಾಲಿಸಿಸ್ ಘಟಕವನ್ನು ಆರಂಭಿಸುವ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರತಿನಿಧಿಗಳ ಸಮಸ್ಯೆಗಳನ್ನು ಆಲಿಸಿದ ಯು.ಟಿ. ಖಾದರ್ ಅವರು, “ಎಲ್ಲ ವಿಷಯಗಳನ್ನೂ ಗಂಭೀರವಾಗಿ ಪರಿಶೀಲಿಸಲಾಗುತ್ತದೆ. ಪ್ರತಿನಿಧಿಗಳನ್ನು ಬೆಂಗಳೂರಿಗೆ ಆಹ್ವಾನಿಸಿ, ಸಂಬಂಧಿಸಿದ ಅಧಿಕಾರಿಗಳು ಮತ್ತು ಮಂತ್ರಿಗಳೊಂದಿಗೆ ಸಭೆ ನಡೆಸಿ ವ್ಯವಹಾರಿಕ ಪರಿಹಾರಕ್ಕೆ ಮುಂದಾಗುವುದಾಗಿ ಹೇಳಿದರು.
ಸಭೆಯಲ್ಲಿ ಮುಹಮ್ಮದ್ ಗೌಸ್ ಖಲಿಫಾ, ಅಬು ಮುಹಮ್ಮದ್ ಮುಖ್ತಸರ್, ಸಾಬಿರ್, ಮಜಫ್ಫರ್, ತಾಹಾ ಮುಅಲ್ಲಿಂ, ಯಾಸಿರ್ ಕಾಸಿಮ್ಜಿ, ಕಮರ್ ಸಾದಾ ಸೇರಿದಂತೆ ದುಬೈ ಹಾಗೂ ಯುಎಇಯ ವಿವಿಧ ಸಂಘಟನೆಗಳ ಗಣ್ಯರು ಉಪಸ್ಥಿತರಿದ್ದರು.







