ಭಟ್ಕಳ: ವೆಲ್ಫೇರ್ ಆಸ್ಪತ್ರೆಯಲ್ಲಿ ಸೆ. 20ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಭಟ್ಕಳ: ವೆಲ್ಫೇರ್ ಆಸ್ಪತ್ರೆ, ಭಟ್ಕಳ ಹಾಗೂ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ (BMYF) ವತಿಯಿಂದ ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಎ.ಜೆ. ಆಸ್ಪತ್ರೆ ಹಾಗೂ ರಿಸರ್ಚ್ ಸೆಂಟರ್ ಸಹಯೋಗದಲ್ಲಿ ಸೆ.20ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ವೆಲ್ಫೇರ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಡೆಯುವ ಶಿಬಿರದಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸಲಹೆ ನೀಡಲಿದ್ದಾರೆ.
ಮೂತ್ರಶಾಸ್ತ್ರ ತಜ್ಞ ಡಾ. ರೋಷನ್ ಶೆಟ್ಟಿ, ಮಕ್ಕಳ ತಜ್ಞೆ ಡಾ. ಪವಿತ್ರಾ, ಕಿವಿ, ಮೂಗು ಮತ್ತು ಗಂಟಲು ತಜ್ಞೆ ಡಾ. ದೀಪಲಕ್ಷ್ಮಿ ಹಾಗೂ ಮೂಳೆ ತಜ್ಞ ಡಾ. ಹನ್ನಾನ್ ಅವರು ತಪಾಸಣೆ ನಡೆಸಲಿದ್ದಾರೆ. ಶಿಬಿರದಲ್ಲಿ ಉಚಿತ ಇಸಿಜಿ ತಪಾಸಣೆಯೂ ಲಭ್ಯವಿರಲಿದೆ.
ಹೆಚ್ಚಿನ ಪರೀಕ್ಷೆ ಅಥವಾ ಚಿಕಿತ್ಸೆಯ ಅಗತ್ಯವಿರುವವರಿಗೆ ವೆಲ್ಫೇರ್ ಆಸ್ಪತ್ರೆಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸಲಾಗುವುದು. ಮುಂದಿನ ಚಿಕಿತ್ಸೆಗೆ ಶಿಫಾರಸು ಮಾಡಲಾದವರಿಗೆ ಪ್ರಯೋಗಾಲಯ ಪರೀಕ್ಷೆ, ರೇಡಿಯಾಲಜಿ, ಔಷಧಿ ಹಾಗೂ ಡಯಾಗ್ನೋಸ್ಟಿಕ್ ಸೇವೆಗಳಲ್ಲಿ ಶೇ 20ರಿಂದ 40ರಷ್ಟು ರಿಯಾಯಿತಿ ನೀಡಲಾಗುವುದು. ಆಸ್ಪತ್ರೆ ದಾಖಲಾತಿಗೂ ಅಗತ್ಯ ರಿಯಾಯಿತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಪ್ರೀತಮ್ ಫ್ರಾನ್ಸಿಸ್ ವಾಸ್, ವೆಲ್ಫೇರ್ ಆಸ್ಪತ್ರೆಯ ಆಡಳಿತಾಧಿಕಾರಿ ಅಬುಲ್ ಅಲಾ ಬರ್ಮಾವರ್, BMYF ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹಲ್ಲಾರೆ, ಸಾಮಾಜಿಕ ಕಾರ್ಯದರ್ಶಿ ಜಹೀರ್ ಶೇಖ್ ಹಾಗೂ ಎ.ಜೆ. ಆಸ್ಪತ್ರೆಯ ಎಕ್ಸಿಕ್ಯೂಟಿವ್–ಮಾರ್ಕೆಟಿಂಗ್ ಆಶ್ರಫ್ ಸಾದಾ ಉಪಸ್ಥಿತರಿದ್ದರು.






