ಭಟ್ಕಳ: ಮನೆ ಕಳ್ಳತನ ಪ್ರಕರಣ ; ಇಬ್ಬರ ಬಂಧನ

ಭಟ್ಕಳ: ಇಲ್ಲಿನ ಪುರವರ್ಗದಲ್ಲಿ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಭಟ್ಕಳ ನಗರ ಠಾಣೆ ಪೊಲೀಸರು, ದೂರು ದಾಖಲಾದ ಎಂಟು ಗಂಟೆಗಳೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುರವರ್ಗದ ಗಣೇಶನಗರ ನಿವಾಸಿಗಳಾದ ಮುಹಮ್ಮದ್ ರಾಹಿಲ್ (39) ಹಾಗೂ ನೌಶಾದ್ ಮುಖ್ತಾರ್ ಅಹ್ಮದ್ ಹಂಚಿ (28) ಬಂಧಿತ ಆರೋಪಿಗಳು. ಇಬ್ಬರೂ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 20ರಂದು ಪುರವರ್ಗದ ನಿವಾಸಿ ಬಿಬಿ ಇನ್ಸಿಯಾ ಮುಹಮ್ಮದ್ ರೆಹಾನ್ ಸಾಬ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಗೆ ನುಗ್ಗಿದ ಕಳ್ಳರು, ಮಲಗುವ ಕೋಣೆಯ ಬೀಗ ಒಡೆದು ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದರು. ಈ ಕುರಿತು ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿದ್ದರು.
ತನಿಖೆ ವೇಳೆ ಪುರವರ್ಗ ಸಮೀಪವೇ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಯಲ್ಲಿ ಆರೋಪಿಗಳು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳಿಂದ ಅಂದಾಜು 2.21 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 22,950 ರೂ. ನಗದು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಕೃಷ್ಣಮೂರ್ತಿ ಹಾಗೂ ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಗಿರೀಶ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತು. ತಂಡದಲ್ಲಿ ಸಿಪಿಐ ದಿವಾಕರ ಪಿ.ಎಂ., ಪಿಎಸ್ಸೈ ನವೀನ್ ಎಸ್. ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.






