ಭಟ್ಕಳ | ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನ.21ರಿಂದ 30ರವರೆಗೆ ನೆರೆಹೊರೆಯವರ ಹಕ್ಕುಗಳ ಅಭಿಯಾನ

ಭಟ್ಕಳ : ಜಮಾಅತೆ ಇಸ್ಲಾಮಿ ಹಿಂದ್ ದೇಶವ್ಯಾಪಿ ನಡೆಸುತ್ತಿರುವ “ನೆರೆಹೊರೆಯವರ ಹಕ್ಕುಗಳ ಅಭಿಯಾನ” ಕುರಿತು ಭಟ್ಕಳ ಘಟಕದ ವತಿಯಿಂದ ಸುಲ್ತಾನ್ ಸ್ಟ್ರೀಟ್ ದಾವತ್ ಸೆಂಟರ್‌ನಲ್ಲಿ ಬುಧವಾರ ಆಯೋಜಿಸಿದ ಪತ್ರಿಕಾ ಗೋಷ್ಟಿಯಲ್ಲಿ ಸಂಘಟನೆಯ ಅಧ್ಯಕ್ಷ ಮೌಲಾನಾ ಸೈಯದ್ ಝುಬೇರ್ ಎಸ್.ಎಂ. ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ನ.21ರಿಂದ 30ರವರೆಗೆ ನಡೆಯುವ ಈ ಅಭಿಯಾನವನ್ನು “ಮಾದರಿ ನೆರೆಹೊರೆ, ಮಾದರಿ ಸಮಾಜ” ಎಂಬ ಘೋಷವಾಕ್ಯದಡಿ ದೇಶದಾದ್ಯಂತ ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇಸ್ಲಾಮಿನ ಉಪದೇಶಗಳಲ್ಲಿ ನೆರೆಯವರ ಹಕ್ಕುಗಳಿಗೆ ನೀಡಿರುವ ಮಹತ್ವವನ್ನು ಸಮಾಜಕ್ಕೆ ನೆನಪಿಸುವುದು ಮತ್ತು ಅದನ್ನು ಜೀವನದಲ್ಲಿ ಪಾಲನೆಗೊಳಿಸುವುದು ಈ ಅಭಿಯಾನದ ಉದ್ದೇಶ ಎಂದರು.
ಆಧುನಿಕ ಬದುಕಿನಲ್ಲಿ ಹೆಚ್ಚುತ್ತಿರುವ ವೈಯಕ್ತಿಕತೆ ಮತ್ತು ಸಾಮಾಜಿಕ ದೂರದಿಂದ ನೆರೆಯವರ ಹಕ್ಕುಗಳು ಕಡೆಗಣನೆಯಾಗುತ್ತಿರುವುದನ್ನು ಸೂಚಿಸಿದ ಅವರು, “ಸಣ್ಣ–ಪುಟ್ಟ ಕಲಹಗಳು, ಸಂಚಾರ ಶಿಷ್ಟಾಚಾರದ ಕೊರತೆ ಹಾಗೂ ಪರಸ್ಪರ ಅಸಹಕಾರವು ಸಮಾಜದ ಶಾಂತಿಯನ್ನೇ ಹಾಳುಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಹಾನುಭೂತಿ, ಸೌಹಾರ್ದ ಮತ್ತು ಶಿಷ್ಟತೆಯನ್ನು ಬಲಪಡಿಸುವುದು ತುಂಬಾ ಅಗತ್ಯ” ಎಂದು ಹೇಳಿದರು.
ಅಭಿಯಾನದ 10 ದಿನಗಳಲ್ಲಿ ನೆರೆಯವರ ಹಕ್ಕು–ಕರ್ತವ್ಯಗಳ ಜಾಗೃತಿ, ಸ್ನೇಹಪೂರ್ಣವಾಗಿ ದೂರು ಪರಿಹಾರಕ್ಕೆ ಮಾರ್ಗದರ್ಶನ, ಸಂಚಾರ ಮತ್ತು ಸಾರ್ವಜನಿಕ ಸ್ಥಳಗಳ ಶಿಷ್ಟಾಚಾರ ಕುರಿತು ಶಿಕ್ಷಣ, ಉತ್ತಮ ನೆರೆಹೊರೆಯ ಮಾದರಿಗಳನ್ನು ಹೊರತರುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಭಟ್ಕಳದಲ್ಲಿ ಮನೆ–ಮನೆ ಜಾಗೃತಿ, ಸಮಾಜ ಸಭೆಗಳು, ಮಸೀದಿ ಕೇಂದ್ರಿತ ಕಾರ್ಯಕ್ರಮಗಳು, ಯುವಕರ ವಿಶೇಷ ಚಟುವಟಿಕೆಗಳು ಹಾಗೂ ಮಾದರಿ ಬಡಾವಣೆಗಳ ವರದಿ ಸಂಗ್ರಹಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿವೆ ಎಂದು ಅವರು ತಿಳಿಸಿದರು.
“ಈ ಅಭಿಯಾನವು ಸಮಾಜದಲ್ಲಿ ಒಗ್ಗಟ್ಟು, ಸೌಹಾರ್ದ ಮತ್ತು ಪರಸ್ಪರ ಗೌರವವನ್ನು ವೃದ್ಧಿಸುವ ಮಹತ್ತರ ಹೆಜ್ಜೆಯಾಗಲಿದೆ. ಹೊಸ ಪೀಳಿಗೆಗೆ ಇಸ್ಲಾಮಿನ ಮಾನವೀಯ ಮೌಲ್ಯಗಳನ್ನು ತಲುಪಿಸುವ ಗುರಿ ಇದಾಗಿದೆ” ಎಂದು ಮೌಲಾನಾ ಝುಬೇರ್ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.







