Bhatkal | ಶಾಸಕ ಮಂಕಾಳ ವೈದ್ಯರಿಗೆ ಮೀನುಗಾರಿಕೆ ಖಾತೆ ನೀಡಲು ಆಗ್ರಹ

ಭಟ್ಕಳ : ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಭಟ್ಕಳ–ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಅವರಿಗೆ ಮತ್ತೆ ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಜವಾಬ್ದಾರಿಯನ್ನು ವಹಿಸಬೇಕು ಎಂದು ಮೋಗೇರ ಸಮಾಜ ಹಾಗೂ ವಿವಿಧ ಮೀನುಗಾರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೋಗೇರ, ಮಂಕಾಳ ವೈದ್ಯ ಅವರು ಈ ಹಿಂದೆ ಮೀನುಗಾರಿಕೆ ಸಚಿವರಾಗಿದ್ದ ಅವಧಿಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಸಣ್ಣ ಬಂದರುಗಳ ಅಭಿವೃದ್ಧಿ, ಮೀನುಗಾರರ ಸಮಸ್ಯೆಗಳ ಪರಿಹಾರ ಹಾಗೂ ಸಮುದ್ರ ಅಪಘಾತಗಳ ಸಂದರ್ಭದಲ್ಲಿ ಸಂತ್ರಸ್ತರಿಗೆ ತ್ವರಿತ ಪರಿಹಾರ ಒದಗಿಸುವಲ್ಲಿ ವಿಶೇಷ ಕಾಳಜಿ ವಹಿಸಿದ್ದರು ಎಂದು ಹೇಳಿದರು.
ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಣ್ಣ ಸಮುದಾಯಗಳಿಗೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವ ಪರಂಪರೆಯನ್ನು ಸರ್ಕಾರ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.
ಮೋಗೇರ ಸಮಾಜದ ಉಪಾಧ್ಯಕ್ಷ ಭಾಸ್ಕರ ಮೋಗೇರ ಮಾತನಾಡಿ, ಮಂಕಾಳ ವೈದ್ಯ ಅವರಿಗೆ ಮತ್ತೆ ಸಚಿವ ಸ್ಥಾನ ಹಾಗೂ ಮೀನುಗಾರಿಕೆ ಖಾತೆ ನೀಡುವಂತೆ ಕೋರಿ ಶೀಘ್ರದಲ್ಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾಸ್ಕರ ದೈಮನೆ, ನಾರಾಯಣ ಚೊಬ್ಬಿಮನೆ, ಎಫ್.ಕೆ. ಮೋಗೇರ, ದೇವಿದಾಸ ಮೋಗೇರ ಸೇರಿದಂತೆ ಸಂಘಟನೆಯ ಹಲವು ಮುಖಂಡರು ಉಪಸ್ಥಿತರಿದ್ದರು.






