ಭಟ್ಕಳ: ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ; ಮೀನುಗಾರ ಮಹಿಳೆಯರಿಂದ ಪ್ರತಿಭಟನೆ

ಭಟ್ಕಳ: ಭಟ್ಕಳದ ಹಳೇ ಬಸ್‌ಸ್ಟಾಂಡ್‌ನಲ್ಲಿರುವ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸುವ ಪುರಸಭೆಯ ನಿರ್ಧಾರವನ್ನು ವಿರೋಧಿಸಿ ಮೀನುಗಾರ ಮಹಿಳೆಯರು, ಅಂಗಡಿಕಾರರು ಮತ್ತು ರಿಕ್ಷಾ ಚಾಲಕರು ತಾಲೂಕು ಕಚೇರಿಗೆ ಮೆರವಣಿಗೆ ನಡೆಸಿ, ತಹಶೀಲ್ದಾರರ ಮೂಲಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಪುರಸಭಾ ಸದಸ್ಯ ಹಾಗೂ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ, ಹಳೇ ಬಸ್‌ಸ್ಟಾಂಡ್‌ನಲ್ಲಿರುವ ಮೀನು ಮಾರುಕಟ್ಟೆಯು ಅನಾದಿ ಕಾಲದಿಂದಲೂ ಇದೆ. ಇಲ್ಲಿ 200ಕ್ಕೂ ಹೆಚ್ಚು ಮೀನು ಮಾರಾಟಗಾರ ಮಹಿಳೆಯರು, ನೂರಾರು ಅಂಗಡಿಗಳು ಮತ್ತು ರಿಕ್ಷಾ ನಿಲ್ದಾಣಗಳಿವೆ. ಸಾವಿರಾರು ಜನ ಈ ಮಾರುಕಟ್ಟೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ, ಯಾರೊಂದಿಗೂ ಚರ್ಚಿಸದೆ ಪುರಸಭೆಯು ಈ ಮಾರುಕಟ್ಟೆಯನ್ನು ಸಂತೆ ಮಾರುಕಟ್ಟೆಯ ಬಳಿಯ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ, ಈ ಜಾಗದಲ್ಲಿ ದೊಡ್ಡ ಮಳಿಗೆ ನಿರ್ಮಿಸಲು ಉದ್ದೇಶಿಸಿದೆ. ಈ ಜಾಗದಲ್ಲಿ ಹೊಸ ಮೀನು ಮಾರುಕಟ್ಟೆಯನ್ನು ಕಟ್ಟಲು ನಮಗೆ ವಿರೋಧವಿಲ್ಲ, ಆದರೆ ಸ್ಥಳಾಂತರಕ್ಕೆ ಒಪ್ಪಿಗೆ ಇಲ್ಲ ಎಂದು ಆಕ್ಷೇಪಿಸಿದರು.
ಮೀನುಗಾರ ಮಹಿಳೆಯರಾದ ಕಲ್ಯಾಣಿ ಮೊಗೇರ, ಖಾಜಾ ಹುಸೇನ್ ಮತ್ತು ರಾಮಣ್ಣ ಬಳೆಗಾರ ಮಾತನಾಡಿ, ಪುರಸಭೆಯು ಇತ್ತೀಚೆಗೆ ಹಳೇ ಮೀನು ಮಾರುಕಟ್ಟೆಯನ್ನು ಸಂತೆ ಮಾರುಕಟ್ಟೆಯ ಬಳಿಯ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಪ್ರಕಟಣೆ ಹೊರಡಿಸಿದೆ. ಆದರೆ, ಈ ಬಗ್ಗೆ ಯಾವುದೇ ಮುಂಚಿತ ಸಭೆ ಕರೆದು ಚರ್ಚಿಸಿಲ್ಲ. ಹೊಸ ಮಾರುಕಟ್ಟೆಯು ಕೇವಲ 60 ಜನರಿಗೆ ಸಾಮರ್ಥ್ಯ ಹೊಂದಿದ್ದು, 150-200 ಮೀನು ಮಾರಾಟಗಾರರಿರುವ ಈ ಮಾರುಕಟ್ಟೆಯನ್ನು ಸ್ಥಳಾಂತರಿಸುವುದು ದುರುದ್ದೇಶಪೂರ್ವಕವಾಗಿದೆ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು.
ಮನವಿಯನ್ನು ಪ್ರತಿಭಟನೆಯಲ್ಲಿ ಶ್ರೀಧರ ನಾಯ್ಕ, ಪಾಂಡುರಂಗ ನಾಯ್ಕ, ರಮೇಶ ನಾಯ್ಕ, ಮೊಹಮ್ಮದ್ ಸಲೀಮ್, ವಿವೇಕ ನಾಯ್ಕ , ಸೇರಿದಂತೆ ನೂರಾರು ಮೀನುಗಾರ ಮಹಿಳೆಯರು ಭಾಗವಹಿಸಿದ್ದರು.







