ಭಟ್ಕಳ : ಕಪ್ಪೆಚಿಪ್ಪು ಸಂಗ್ರಹಕ್ಕೆ ತೆರಳಿದ್ದವರು ನೀರುಪಾಲು; ಮೃತರ ಸಂಖ್ಯೆ 11ಕ್ಕೆ ಏರಿಕೆ

ಭಟ್ಕಳ: ತಾಲೂಕಿನ ತಟ್ಟಿಹಕ್ಕಲು ಸಮೀಪದ ವೆಂಕಟಾಪುರ ನದಿಯಲ್ಲಿ ಕಪ್ಪೆಚಿಪ್ಪು (ಮಳ್ವಿ) ಸಂಗ್ರಹಿಸಲು ನದಿಗೆ ಇಳಿದಿದ್ದ 11 ಮಂದಿ ಜಲಸಮಾಧಿಯಾಗಿದ್ದು, ನಾಪತ್ತೆಯಾಗಿದ್ದ ಒಬ್ಬ ವ್ಯಕ್ತಿಯ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ರವಿವಾರ ಸಮುದ್ರದ ಭರತಕ್ಕೆ ಸಿಲುಕಿದ 11 ಮಂದಿ ನೀರುಪಾಲಾಗಿದ್ದರು. ಘಟನೆ ನಡೆದ ದಿನವೇ 10 ಮಂದಿಯ ಮೃತದೇಹಗಳನ್ನು ಮೇಲಕ್ಕೆತ್ತಲಾಗಿತ್ತಾದರೂ, ಒಬ್ಬರು ನಾಪತ್ತೆಯಾಗಿದ್ದರು. ಸೋಮವಾರ ಬೆಳಿಗ್ಗೆ ಪಡುಶಿರಾಲಿಯ ಮಾದೇವ ಬೈರಪ್ಪ ನಾಯ್ಕ (52) ಅವರ ಮೃತದೇಹ ಪತ್ತೆಯಾಗಿದೆ.
ಮೃತಪಟ್ಟವರು ಭಟ್ಕಳ ತಾಲೂಕಿನ ಸಾರದಹೊಳೆಯ ಪಡುಶಿರಾಲಿ ಹಾಗೂ ಹಿರೆಹಿತ್ಲು ಗ್ರಾಮಗಳಿಗೆ ಸೇರಿದವರಾಗಿದ್ದಾರೆ.
ಮೃತರಲ್ಲಿ ಮಾದೇವ ಬೈರಪ್ಪ ನಾಯ್ಕ (52), ಲಕ್ಷ್ಮಿ ಮಾದೇವ ನಾಯ್ಕ (38), ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಮ ನಾಯ್ಕ (39), ಉಮೇಶ ಮಂಜುನಾಥ ನಾಯ್ಕ (25), ಮಾಸ್ತಮ್ಮ ಮಂಜುನಾಥ ನಾಯ್ಕ (43), ಲಕ್ಷ್ಮಿ ಅಣ್ಣಪ್ಪ ನಾಯ್ಕ (44), ಮಾಲತಿ ಜಟ್ಟಪ್ಪ ನಾಯ್ಕ (38), ಮಂಜಮ್ಮ ಗೊಯ್ದಾ ನಾಯ್ಕ (50), ನಾಗರತ್ನ ಪರಮೇಶ್ವರ ನಾಯ್ಕ (40) ಹಾಗೂ ಜ್ಯೋತಿ ನಾಗಪ್ಪ ನಾಯ್ಕ (37) ಸೇರಿದ್ದಾರೆ.
ದುರಂತದ ವೇಳೆ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದ ನಾಗರತ್ನ ಈಶ್ವರ ನಾಯ್ಕ, ಮಾದೇವಿ ನಾಯ್ಕ ಹಾಗೂ ಲಲಿತಾ ಜಗದೀಶ ನಾಯ್ಕ ಅವರನ್ನು ರಕ್ಷಿಸಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ತಕ್ಷಣವೇ ಪೊಲೀಸ್ ಇಲಾಖೆ, ಎನ್‌ಡಿಆರ್‌ಎಫ್, ಕರಾವಳಿ ಭದ್ರತಾ ಪಡೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.
ಭಾನುವಾರ ರಾತ್ರಿ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ಅವರ ತಂಡ ಕತ್ತಲೆಯ ನಡುವೆಯೂ ಕಾರ್ಯಾಚರಣೆ ಮುಂದುವರಿಸಿ, ಸೋಮವಾರ ಬೆಳಿಗ್ಗೆ ಕೊನೆಯ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು.






