ಭಟ್ಕಳ| ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಮಾರಾಟ ಪ್ರಕರಣ: ಆರೋಪಿ ಸೆರೆ

ಭಟ್ಕಳ: ನಗರದ ಹೂವಿನ ಚೌಕ್ ಸಮೀಪದ ಮಾರ್ಕೆಟ್‌ನಲ್ಲಿ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಹಾಗೂ ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳನ್ನು (ವೇಪ್ಸ್) ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಭಟ್ಕಳ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಾರಗದ್ದೆ ನಿವಾಸಿ ಸಿದ್ದಿಕ್ ಅಬ್ದುಲ್ ರೆಹಮಾನ್ @ ಮಸ್ತಾನ್ (58) ಎಂದು ಗುರುತಿಸಲಾಗಿದೆ. ಯಾವುದೇ ಪರವಾನಗಿ ಅಥವಾ ಅನುಮತಿ ಇಲ್ಲದೆ ತನ್ನ ಅಂಗಡಿಯಲ್ಲಿ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 1ರಂದು ರಾತ್ರಿ ಸುಮಾರು 10.30 ಗಂಟೆಗೆ ಪೊಲೀಸರು ನಡೆಸಿದ ದಾಳಿಯಲ್ಲಿ ಒಟ್ಟು 1,38,500 ಮೌಲ್ಯದ ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 76,000 ಮೌಲ್ಯದ 38 ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಹಾಗೂ 62,500 ಮೌಲ್ಯದ 125 ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಟ್ಕಳ ಉಪ ಪೊಲೀಸ್ ಅಧೀಕ್ಷಕ ಮಹೇಶ್ ಎಂ.ಕೆ. ಅವರ ಮಾರ್ಗದರ್ಶನದಲ್ಲಿ, ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಕಾರ್ಯಾಚರಣೆಯಲ್ಲಿ ಪಿಎಸ್ಐ ನವೀನ ನಾಯ್ಕ ಸೇರಿದಂತೆ ಸಿಬ್ಬಂದಿಗಳಾದ ಉದಯ ನಾಯ್ಕ, ದೀಪಕ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ್, ರೇವಣಸಿದ್ದಪ್ಪ ಮಾಗಿ, ಜಗದೀಶ ನಾಯ್ಕ ಹಾಗೂ ಸುರೇಶ್ ಮರಾಠಿ ಭಾಗವಹಿಸಿದ್ದರು.
ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







