ಭಟ್ಕಳ: ಆ.9ರಂದು ರಾಬಿತಾ ಶೈಕ್ಷಣಿಕ ಉತ್ಕೃಷ್ಟತಾ ಪ್ರಶಸ್ತಿ ಪ್ರದಾನ ಸಮಾರಂಭ

ಭಟ್ಕಳ: 35 ವರ್ಷಗಳಿಂದ ನಿರಂತರವಾಗಿ ಆಯೋಜಿಸಲಾಗುತ್ತಿರುವ ರಾಬಿತಾ ಶೈಕ್ಷಣಿಕ ಉತ್ಕೃಷ್ಟತಾ ಪ್ರಶಸ್ತಿ–2026 ಪ್ರದಾನ ಸಮಾರಂಭವು ಆಗಸ್ಟ್ 9ರಂದು ಪಟ್ಟಣದ ಅಂಜುಮನ್ ಐಎಯುಎಚ್‌ಎಸ್ (IAUHS) ಮೈದಾನದಲ್ಲಿ ನಡೆಯಲಿದೆ ಎಂದು ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಡಾ. ಅತಿಕುರ್ಹ್ಮಾನ್ ಮುನಿರಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮವು ಎರಡು ಅವಧಿ ಗಳಲ್ಲಿ ನಡೆಯಲಿದ್ದು, ಮೊದಲ ಅವಧಿಯು ಬೆಳಿಗ್ಗೆ 10ರಿಂದ ಮಧ್ಯಾಹ್ನ 12.45ರವರೆಗೆ ಹಾಗೂ ಎರಡನೇ ಅವಧಿಯು ಅಸ್ರ್ ನಮಾಜಿನ ಬಳಿಕ ಸಂಜೆ 7ರವರೆಗೆ ನಡೆಯಲಿದೆ ಎಂದು ಹೇಳಿದರು.
ಈ ಬಾರಿಯ ಸಮಾರಂಭದ ಮುಖ್ಯ ಅತಿಥಿಯಾಗಿ ದೇಶದ ಹೆಸರಾಂತ ಯುಪಿಎಸ್‌ಸಿ ಮಾರ್ಗದರ್ಶಕ ಹಾಗೂ ಐಎಎಸ್ ತರಬೇತುದಾರ ಸಮೀರ್ ಅಹ್ಮದ್ ಸಿದ್ದಿಕಿ ಭಾಗವಹಿಸಲಿದ್ದಾರೆ. ದೆಹಲಿಯ ವಿವಿಧ ನಾಗರಿಕ ಸೇವಾ ತರಬೇತಿ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿರುವ ಅವರು ಸಾವಿರಾರು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಅನುಭವ ಹೊಂದಿದ್ದಾರೆ ಎಂದರು.
ಈ ವರ್ಷದ ಪ್ರಶಸ್ತಿಗೆ ನಾಲ್ಕು ವಿಭಾಗಗಳಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಭಟ್ಕಳ ವಲಯದ ಸ್ಥಳೀಯ ಶಾಲೆಗಳ ಟಾಪರ್‌ಗಳು, ಗಲ್ಫ್ ರಾಷ್ಟ್ರಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಟ್ಕಳ ಮೂಲದ ವಿದ್ಯಾರ್ಥಿಗಳು, ದೇಶದ ವಿವಿಧ ನಗರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಟ್ಕಳದ ವಿದ್ಯಾರ್ಥಿಗಳು ಹಾಗೂ ಕೆನರಾ ಮುಸ್ಲಿಂ ಖಲೀಜ್ ಕೌನ್ಸಿಲ್ ವ್ಯಾಪ್ತಿಯ ಗಂಗೊಳ್ಳಿಯಿಂದ ಹೊನ್ನಾವರ ತಾಲ್ಲೂಕಿನವರೆಗಿನ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಈ ಬಾರಿ ಅರ್ಹತಾ ಮಾನದಂಡದಲ್ಲಿಯೂ ಬದಲಾವಣೆ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ ಟಾಪರ್‌ಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾ ಗುವುದು. ಕಳೆದ ವರ್ಷ ದ್ವಿತೀಯ ಪಿಯುಸಿಗೆ ಇದ್ದ ಶೇ.90ರ ಕನಿಷ್ಠ ಅರ್ಹತೆಯನ್ನು ಈ ಬಾರಿ ಶೇ.95ಕ್ಕೆ ಏರಿಸ ಲಾಗಿದೆ. ಅಂಜುಮನ್ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳ ಟಾಪರ್‌ಗಳಿಗೂ ಪ್ರಶಸ್ತಿ ನೀಡಲಾಗುತ್ತಿದ್ದು, ಸ್ನಾತಕೋತ್ತರ ವಿಭಾಗಕ್ಕೆ ಶೇ.85 ಅಂಕಗಳನ್ನು ಅರ್ಹತಾ ಮಾನದಂಡವಾಗಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ, ಜಾಮಿಯಾ ಇಸ್ಲಾಮಿಯಾ ಹಾಗೂ ಜಾಮಿಯಾತುಸ್ ಸಾಲಿಹಾತ್ ಸಂಸ್ಥೆಗಳ ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ಟಾಪರ್‌ಗಳು, ಅತ್ಯುತ್ತಮ ಶಾಲೆ ಹಾಗೂ ಅತ್ಯುತ್ತಮ ಶಿಕ್ಷಕರಿಗೂ ವಿಶೇಷ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಅಬ್ದುಲ್ ಸಲಾಮ್ ದಮದ ಅಬು ಅವರ ನೇತೃತ್ವದಲ್ಲಿ ವಿವಿಧ ಸಮಿತಿ ಗಳು ಸಕಲ ಸಿದ್ಧತೆಗಳನ್ನು ಕೈಗೊಂಡಿವೆ ಎಂದು ಡಾ. ಅತಿಕುರ್ಹ್ಮಾನ್ ಮುನಿರಿ ತಿಳಿಸಿದರು.
ರಾಬಿತಾ ಸೂಸೈಟಿ ಅಧ್ಯಕ್ಷ ಮುಹಮ್ಮದ್ ಫಾರೂಕ್ ಮುಸ್ಬ, ಮೌಲನಾ ಸಾಬೀರ್ ಉಪಸ್ಥಿತರಿದ್ದರು.






