ಭಟ್ಕಳ | ನ.20ರಂದು ವಿಜ್ಞಾನ ಮೇಳ : ಲಿಯಾಖತ್ ಅಲಿ

ಭಟ್ಕಳ, ನ.18: ಭಟ್ಕಳದ ತರ್ಬಿಯತ್ ಎಜುಕೇಶನ್ ಸೊಸೈಟಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಮ್ಸ್ ಪದವಿ ಪೂರ್ವ ಕಾಲೇಜ್ ನ.20ರಂದು ಎರಡನೇ ವಿಜ್ಞಾನ ಮೇಳವನ್ನು ಆಯೋಜಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಲಿಯಾಖತ್ ಅಲಿ ಹೇಳಿದ್ದಾರೆ.
ಡಾ.ಎಂ.ಟಿ.ಹಸನ್ ಬಾಪಾ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಭಟ್ಕಳ ಸೈನ್ಸ್ ಫೇರ್ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು. ವಿಜ್ಞಾನ ಮೇಳದ ಮುಖ್ಯ ಉದ್ದೇಶ ಕೇವಲ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸುವುದಲ್ಲ. ಬದಲಿಗೆ, ವಿದ್ಯಾರ್ಥಿಗಳು ಸಮಾಜವು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಬೇಕು, ಅವುಗಳ ಕುರಿತು ಸಂಶೋಧನಾ ಮನಸ್ಥಿತಿಯೊಂದಿಗೆ ಕಾರ್ಯನಿರ್ವಹಿಸಿ ಪರಿಹಾರಗಳನ್ನು ಹೊರತರುವಂತೆ ಮಾಡುವುದು ಇದರ ಗುರಿಯಾಗಿದೆ ಎಂದು ಹೇಳಿದರು.
ಕಾಲೇಜ್‌ನ ಆಡಳಿತ ಪ್ರಾಂಶುಪಾಲ ಮುಹಮ್ಮದ್ ರಝಾ ಮಾತನಾಡಿ, ಶಮ್ಸ್ ಪದವಿ ಪೂರ್ವ ಕಾಲೇಜು ರಾಯಚೂರಿನ ಎಜೆ ಅಕಾಡಮಿ ಆಫ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್‌ನ ಸಹಯೋಗದೊಂದಿಗೆ ವಿಜ್ಞಾನ ಮೇಳವನ್ನು ಆಯೋಜಿಸಿದೆ. ಈ ಮೇಳಕ್ಕಾಗಿ ಭಟ್ಕಳ ತಾಲೂಕಿನ ಶಾಲೆ-ಕಾಲೇಜುಗಳನ್ನು ಆಹ್ವಾನಿಸಲಾಗಿತ್ತು. ಒಟ್ಟು 155 ತಂಡಗಳು ನೋಂದಾಯಿಸಿದ್ದು, ಅದರಲ್ಲಿ 46 ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಮೂರರಿಂದ ನಾಲ್ಕು ತಿಂಗಳುಗಳ ಕಾಲ ಸಂಶೋಧನೆ ನಡೆಸಿರುವ ಫಲಿತಾಂಶಗಳು ನ.20ರಂದು ಹೊರಬರಲಿವೆ ಎಂದರು.
ವಿಜ್ಞಾನ ಮೇಳದ ಉದ್ಘಾಟನಾ ಸಮಾರಂಭವು ಬೆಳಗ್ಗೆ 9:30ಕ್ಕೆ ನಡೆಯಲಿದ್ದು ಅಂಜುಮನ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ. ಮುಹಮ್ಮದ್ ಝುಬೇರ್ ಕೋಲಾ ಮುಖ್ಯ ಅತಿಥಿಯಾಗಿ ಮತ್ತು ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ಶಾನಭಾಗ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.ವಿದ್ಯಾರ್ಥಿಗಳನ್ನು ಉತ್ತೇಜಿಸಲು ‘ವಿಜ್ಞಾನಿ ಪ್ರಶಸ್ತಿ’ , ‘ಬಡ್ಡಿಂಗ್ ಸೈಂಟಿಸ್ಟ್’ ಮತ್ತು ‘ಎಮರ್ಜಿಂಗ್ ಸೈಂಟಿಸ್ಟ್’ ನಂತಹ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಕೋರಿದ್ದಾರೆ.







