ಭಟ್ಕಳ: ಹಿರಿಯ ಸಮಾಜ ಸೇವಕ ತಾಜುದ್ದೀನ್ ಅಸ್ಕರಿ ರಸ್ತೆ ಅಪಘಾತದಲ್ಲಿ ಮೃತ್ಯು

ಭಟ್ಕಳ: ಭಟ್ಕಳದ ಹಿರಿಯ ಸಮಾಜ ಸೇವಕ ತಾಜುದ್ದೀನ್ ಅಸ್ಕರಿ(76) ಗುರುವಾರ ಬೆಳಗ್ಗೆ ಕುಂದಾಪುರದ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳಿಕಟ್ಟೆ ಜಂಕ್ಷನ್ನಲ್ಲಿ ಸಂಭವಿಸಿದ ದುರಂತದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಶುಕ್ರವಾರ ಜಾಮಿಯಾ ಮಸೀದಿ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ತಾಜುದ್ದೀನ್ ಅಸ್ಕರಿ ತಮ್ಮ ಪುತ್ರನೊಂದಿಗೆ ಗುರುವಾರ ಬೆಳಗ್ಗೆ ಕಾರಿನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಮುಳ್ಳಿಕಟ್ಟೆ ಜಂಕ್ಷನ್ನಲ್ಲಿ ಅಪಘಾತಕ್ಕೀಡಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ತಾಜುದ್ದೀನ್ ರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಸೌದಿ ಅರೇಬಿಯಾದ ಜಿದ್ದಾದಲ್ಲಿ ಸುಮಾರು 40 ವರ್ಷಗಳ ಕಾಲ ವಾಸ್ತವ್ಯವಿದ್ದ ತಾಜುದ್ದೀನ್, ಅಲ್ಲಿ ಪ್ರತಿಷ್ಠಿತ ಕಂಪನಿಯ ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಭಟ್ಕಳ ಮುಸ್ಲಿಮ್ ಕಮ್ಯುನಿಟಿ ಜಿದ್ದಾದ ಉಪಾಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ವಿಶೇಷವಾಗಿ ಹಜ್ ಯಾತ್ರಿಗಳಿಗೆ ಸಹಾಯ ಮಾಡುವಲ್ಲಿ ಮತ್ತು ಬಡವರಿಗೆ, ಅಗತ್ಯವಿರುವವರಿಗೆ ನೆರವಾಗುವಲ್ಲಿ ಅವರ ಕೊಡುಗೆ ಗಮನಾರ್ಹವಾಗಿತ್ತು. ಭಟ್ಕಳದ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಬೆಂಬಲ ನೀಡುತ್ತಿದ್ದರು.
ಮೃತರು ಪತ್ನಿ, ಐವರು ಪುತ್ರಿಯರು, ಓರ್ವ ಪುತ್ರ ಮತ್ತು ಇತರ ಕುಟುಂಬಸ್ಥರನ್ನು ಅಗಲಿದ್ದಾರೆ.
ತಾಜುದ್ದೀನ್ ನಿಧನಕ್ಕೆ ಭಟ್ಕಳ ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಅತೀಕುರ್ ರಹ್ಮಾನ್ ಮುನೀರಿ, ಭಟ್ಕಳ ಮುಸ್ಲಿಮ್ ಕಮ್ಯುನಿಟಿ ಜಿದ್ದಾದ ಅಧ್ಯಕ್ಷ ಕಮರ್ ಸಾದ, ಪ್ರಧಾನ ಕಾರ್ಯದರ್ಶಿ ಫೈಝಾನ್ ಶಾಬಂದ್ರಿ, ಮಾಜಿ ಅಧ್ಯಕ್ಷರಾದ ಅಬ್ದುಸ್ಸಲಾಂ ದಾಮ್ದಾ ಆಬು, ನೌಮಾನ್ ಅಲಿ ಅಕ್ಬರ್, ಮಾಜಿ ಪ್ರಧಾನ ಕಾರ್ಯದರ್ಶಿ ಉಬೈದುಲ್ಲಾ ಅಸ್ಕರಿ, ಮಜ್ಲಿಸ್-ಎ-ಇಸ್ಲಾಹ್ ವಾ ತಂಝೀಮ್ ಭಟ್ಕಳದ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮತ್ತು ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ನದ್ವಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.







