ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ
ಭಟ್ಕಳ: ಮಂಗಳೂರಿನಿಂದ ಹರ್ಯಾಣ ರಾಜ್ಯಕ್ಕೆ ಗೇರು ಎಣ್ಣೆ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ರಾ.ಹೆ.66 ಭಟ್ಕಳ ಬೈಪಾಸ್ ಬಳಿ ನಡೆದಿದೆ.
ಘಟನೆಯಲ್ಲಿ ಟ್ಯಾಂಕರ್ ಚಾಲಕ ರಾಜಸ್ಥಾನ ಮೂಲದ ಮದನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಾಗಾರಿಯಿಂದಾಗಿ ಇಂತಹ ರಸ್ತೆ ಅಪಘಾತಗಳು ದಿನ ನಿತ್ಯ ನಡೆಯುತ್ತಲೆ ಇದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರವರ್ಗದಿಂದ ಬೈಪಾಸ್ ಹೋಗುವ ರಸ್ತೆ ಮದ್ಯೆ ಹಂಪ್ಸ್ (ರಸ್ತೆ ತಡೆ) ಹಾಕಲಾಗಿದ್ದು ಟ್ಯಾಂಕರ್ ಮುಂದೆ ಸಾಗುತ್ತಿದ್ದ ಬಸ್ ಚಾಲಕ ಅಕಸ್ಮಿಕವಾಗಿ ಬ್ರೇಕ್ ಹಾಕಿದ್ದು ಗಲಿಬಿಲಿಗೊಂಡ ಟ್ಯಾಂಕರ್ ಚಾಲಕ ಬಸ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿರುವ ಸಣ್ಣ ಪ್ರಪಾತಕ್ಕೆ ಎಡವಿದ್ದಾನೆ ಇದರಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಪ್ರಪಾತಕ್ಕೆ ಉರುಳಿದ ಟ್ಯಾಂಕರ್ ತೆರವುಗೊಳಿಸಲು ಶನಿವಾರ ಮದ್ಯಾಹ್ನದ ವರೆಗೆ ಹರಸಾಹಸ ನಡೆಲಾಯಿತು. ಜೆಸಿಬಿ ಮೂಲಕ ಕೊನೆಗೆ ಟ್ಯಾಂಕರನ್ನು ಮೇಲಕ್ಕೆ ಎತ್ತಲಾಯಿತು ಎಂದು ತಿಳಿದುಬಂದಿದೆ. ಆಗ್ನಿಶಾಮಕ ದಳದ ಸಿಬ್ಬಂದಿಗಳು, ನಗರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಘಟನೆ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅವಾಂತರ ಹಾಗೂ ರಸ್ತೆಯ ಸುರಕ್ಷತೆ ಕುರಿತು ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.