ಭಟ್ಕಳ | ಸಾಮಾಜಿಕ ಜಾಲತಾಣದಲ್ಲಿ ಸಚಿವರ ವಿರುದ್ಧ ಅವಮಾನಕಾರಿ ವಿಡಿಯೊ ಹರಿಬಿಟ್ಟ ಆರೋಪ : ಇಬ್ಬರ ಬಂಧನ

ಭಟ್ಕಳ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವಮಾನ ಉಂಟುಮಾಡುವ ಉದ್ದೇಶದಿಂದ ತಪ್ಪು ಸಂದೇಶ ಹರಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಮುರುಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ನಾಗರಾಜ ಮಾದೇವ ನಾಯ್ಕ ಮತ್ತು ಭಾಸ್ಕರ ನಾರಾಯಣ ದೇವಾಡಿಗ ಎಂದು ಗುರುತಿಸಲಾಗಿದೆ.
"ಭಟ್ಕಳಕ್ಕೆ ಬದಲಾವಣೆ" ಎಂಬ ಫೇಸ್‌ಬುಕ್ ಖಾತೆಯ ಮೂಲಕ 1 ನಿಮಿಷ 29 ಸೆಕೆಂಡ್‌ಗಳ ಅವಧಿಯ ವಿಡಿಯೊವೊಂದನ್ನು ಆರೋಪಿಗಳು ಹಂಚಿಕೊಂಡಿದ್ದಾರೆ. ಈ ವಿಡಿಯೊ ಜಿಲ್ಲಾ ಉಸ್ತುವಾರಿ ಸಚಿವರಿಗೆ ಉದ್ದೇಶಪೂರ್ವಕವಾಗಿ ಅವಮಾನ ಉಂಟುಮಾಡುವ, ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡುವ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಉದ್ದೇಶವನ್ನು ಹೊಂದಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕೃತ್ಯವು ಒಂದು ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಅಪರಾಧಕ್ಕೆ ಪ್ರಚೋದಿಸುವ ಸಂಚಿನ ಭಾಗವಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ʼಭಟ್ಕಳಕ್ಕೆ ಬದಲಾವಣೆʼ ಎಂಬ ಫೇಸ್‌ಬುಕ್ ಖಾತೆಯ ಜೊತೆಗೆ ತೇಜು ನಾಯ್ಕ ಎಂಬ ಫೇಸ್‌ಬುಕ್ ಬಳಕೆದಾರ ಸೇರಿದಂತೆ ಇತರ ಕೆಲವರ ವಿರುದ್ಧವೂ ದೂರು ದಾಖಲಾಗಿದೆ.
ಆರೋಪಿಗಳಾದ ನಾಗರಾಜ ಮಾದೇವ ನಾಯ್ಕ ಮತ್ತು ಭಾಸ್ಕರ ನಾರಾಯಣ ದೇವಾಡಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.





