ಭಟ್ಕಳ: ರಸ್ತೆಗೆ ದಿಢೀರ್ ನುಗ್ಗಿದ ಕಾಡುಹಂದಿ; ನಿಯಂತ್ರಣ ತಪ್ಪಿದ ಆಟೋ ಪಲ್ಟಿ, ಚಾಲಕ ಗಂಭೀರ

ಭಟ್ಕಳ: ಕಾಡುಹಂದಿಯೊಂದು ಏಕಾಏಕಿ ರಸ್ತೆಗೆ ಅಡ್ಡ ಬಂದ ಪರಿಣಾಮ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ–ಸಾಗರ ರಾಜ್ಯ ಹೆದ್ದಾರಿ–50ರ ಭಟ್ಕಳ ನಗರಸಭೆಯ ತ್ಯಾಜ್ಯ ವಿಲೇವಾರಿ ಮೈದಾನದ ಸಮೀಪ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಗಾಯಗೊಂಡ ಚಾಲಕನನ್ನು ಆಸರ್ಕೇರಿ ನಿವಾಸಿ ಶಶಿಕಾಂತ ರಾಮಚಂದ್ರ ಶೆಟ್ಟಿ ಎಂದು ಗುರುತಿಸಲಾಗಿದೆ. ಚಾಲಕನ ತಲೆ, ಕೈಗಳು ಹಾಗೂ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಆಟೋದಲ್ಲಿದ್ದ ಮಹಿಳಾ ಪ್ರಯಾಣಿಕರಾದ ಪದ್ಮಾವತಿ (ಭಟ್ಕಳ ತಾಲ್ಲೂಕಿನ ಕೋಟಖಂಡ್ ಮರುಕೇರಿ ನಿವಾಸಿ, ತರಕಾರಿ ವ್ಯಾಪಾರಿ) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಪದ್ಮಾವತಿ ನೀಡಿದ ದೂರಿನ ಪ್ರಕಾರ, ಅವರು ಭಟ್ಕಳ ಪಟ್ಟಣದಿಂದ ಮರುಕೇರಿ ಕೋಟಖಂಡ್ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಹೆದ್ದಾರಿಯ ಕಸ ವಿಲೇವಾರಿ ಮೈದಾನದ ಬಳಿ ಕಾಡುಹಂದಿಯೊಂದು ಅಚಾನಕ್ ಎದುರು ಬಂದಿದೆ. ಹಂದಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ತುರ್ತುವಾಗಿ ಬ್ರೇಕ್ ಹಾಕಿದ ಪರಿಣಾಮ ಆಟೋ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಯಿತು.
ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







