ಭಟ್ಕಳ : ಕಲಾಸಿರಿ ಪ್ರಶಸ್ತಿ ಪ್ರದಾನ, ಕನ್ನಡ ಕಾವ್ಯೋತ್ಸವ ಕಾರ್ಯಕ್ರಮ

ಭಟ್ಕಳ : ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲಾಸಿರಿ ಪ್ರತಿಷ್ಠಾನ, ಚಿತ್ರಾಪುರ ಶಿರಾಲಿಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ 'ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ' ಕಾರ್ಯಕ್ರಮದ ಅಡಿಯಲ್ಲಿ 'ಡಾ. ಆರ್. ವಿ. ಸರಾಫ್ ಸ್ಮರಣೆ, ಕಲಾಸಿರಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಕಾವ್ಯೋತ್ಸವ' ಕಾರ್ಯಕ್ರಮವು ಇಲ್ಲಿನ ಚಿತ್ರಾಪುರ ರಸ್ತೆಯಲ್ಲಿನ ಸಾಹಿತಿ ಶ್ರೀಧರ ಶೇಟ್ ನಿವಾಸ 'ಕಲಾಸಿರಿ'ಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ಸಾಹಿತಿ ನಾರಾಯಣ ಯಾಜಿ ಉದ್ಘಾಟಿಸಿ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕಲಾಸಿರಿ ಪ್ರತಿಷ್ಠಾನ ಮನೆಯoಗಳದಲ್ಲಿ ಕಾವ್ಯೋತ್ಸವ ಆಯೋಜಿಸುವುದರ ಜೊತೆಗೆ ಸಾಧಕರನ್ನು ಗುರುತಿಸಿ 'ಕಲಾಸಿರಿ ಪುರಸ್ಕಾರ' ನೀಡುತ್ತಿರುವುದು ಶ್ರೀಧರ್ ಶೇಟ್ ಅವರ ಕುಟುಂಬದ ಕಲೆ, ಸಾಹಿತ್ಯ ಪ್ರೇಮವನ್ನು ಸೂಚಿಸುತ್ತದೆ. ಇಂತಹ ಕಾರ್ಯಕ್ರಮಗಳು ಮತ್ತಷ್ಟು ಕವಿಗಳನ್ನು ,ಕವಿತೆಗಳನ್ನು ಹುಟ್ಟು ಹಾಕಲಿ ಎಂದರಲ್ಲದೇ ಕಲಾಸಿರಿ ಪ್ರತಿಷ್ಠಾನ ಮತ್ತಷ್ಟು ಎತ್ತರಕ್ಕೆರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಕಲಾಸಿರಿ ಪ್ರತಿಷ್ಠಾನದ ಮೂಲಕ ಶ್ರೀಧರ್ ಶೇಟ್ ದಂಪತಿಗಳು ಶಿಕ್ಷಣ ತಜ್ಞ, ಸಾಹಿತ್ಯ ಮತ್ತು ಕಲಾ ಪೋಷಕ ಡಾ. ಆರ್ ನರಸಿಂಹ ಮೂರ್ತಿ ಅವರಿಗೆ ಈ ಬಾರಿಯ 'ಕಲಾಸಿರಿ ಪ್ರಶಸ್ತಿ' ಅರ್ಪಿಸಿ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಅಲ್ಲದೆ ವಿವಿಧ ಸಾಧಕರನ್ನು, ತಮ್ಮ ಸಾಹಿತ್ಯ ಪಯಣದಲ್ಲಿ ಉಪಕರಿಸಿದವರನ್ನು ಸ್ಮರಿಸಿ ಗೌರವಿಸುವ ಸಹೃದಯತೆಯನ್ನು ಮೆರೆದಿದ್ದಾರೆ. ಮಾತ್ರವಲ್ಲ ಸಾಹಿತ್ಯಾರಾಧಕರನ್ನು ಒಂದೆಡೆ ಸೇರಿಸಿ 'ಕಾವ್ಯೋತ್ಸವ' ಸಂಘಟಿಸಿರುವುದು ಎಲ್ಲರಿಗೂ ಮಾದರಿ ಎಂದ ಅವರು, ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಕ್ಕೆ ನೇರವು ನೀಡಿದ ಎಲ್ಲರ ಸಹಕಾರವನ್ನು ಸ್ಮರಿಸಿದರು.
ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಪೋಷಕರಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ '2026ನೇ ಸಾಲಿನ ಕಲಾಸಿರಿ ಪ್ರಶಸ್ತಿ'ಯನ್ನು ಶಿಕ್ಷಣ ತಜ್ಞ, ನಿವೃತ್ತ ಪ್ರಾoಶುಪಾಲ ಡಾ. ಆರ್. ನರಸಿಂಹ ಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿದ ಡಾ. ಆರ್. ನರಸಿಂಹ ಮೂರ್ತಿ ಮಾತನಾಡಿ, ಶಿಕ್ಷಕ ತರಗತಿಯಿಂದಾಚೆ ವಿದ್ಯಾರ್ಥಿಗಳ ಜ್ಞಾನ ವಿಸ್ತಾರಕ್ಕೆ ನೆರವು ನೀಡಬೇಕು, ವಿದ್ಯಾರ್ಥಿಗಳ ಕುತೂಹಲವನ್ನು ತಣಿಸುವ ತಾಳ್ಮೆ ಹೊಂದಿರಬೇಕು. ಅವರ ಪ್ರತಿಭೆಗೆ ಸೂಕ್ತ ಪ್ರೋತ್ಸಾಹವನ್ನು ನೀಡಬೇಕು. 'ಕಲಾಸಿರಿ ಪ್ರತಿಷ್ಠಾನ' ನೀಡಿದ ಗೌರವ ಸಂತಸ ನೀಡಿದೆ. ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಕಾರ್ಯಕ್ರಮಗಳ ಮೂಲಕ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ. ಆರ್ ನಾಯ್ಕ, ಶಿರಾಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ, ಸಾಹಿತಿ ಮಾನಾಸುತ ಶಂಭು ಹೆಗಡೆ, ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ, ದುರ್ಗಾಪರಮೇಶ್ವರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಕೆ. ಬಿ. ಮಡಿವಾಳ, ಉಳ್ಮಣ್ ಶಾಲೆಯ ಮುಖ್ಯಾಧ್ಯಾಪಕ ಡಿ. ಐ. ಮೊಗೇರ್ ಗೌರವ ಸನ್ಮಾನ ಸ್ವೀಕರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಕನ್ನಡ ಕಾವ್ಯೋತ್ಸವದಲ್ಲಿ ಕವಿಗಳಾದ ಎಂ. ಡಿ. ಪಕ್ಕಿ, ಕೃಷ್ಣ ಮೊಗೇರ್ ಅಳ್ವೆಕೋಡಿ, ಸುರೇಶ ಮುರ್ಡೇಶ್ವರ, ಜಯಶ್ರೀ ಆಚಾರಿ, ಸುಧಾ ಭಟ್, ಸುಮಲತಾ ನಾಯ್ಕ, ರಾಘವೇಂದ್ರ ಮಡಿವಾಳ, ಹೇಮಲತಾ ಶ್ರೀಧರ್, ಕೆ. ಎಲ್. ಶಾನಭಾಗ್, ನಂದನ ನಾಯ್ಕ,ರಾಜೀವಿ ಮೊಗೇರ್, ಶಂಕರ್ ನಾಯ್ಕ, ನಾಗರತ್ನ ನಾಯ್ಕ, ತೇಜ ಮೊಗೇರ್, ಮುಂತಾದವರು ಸ್ವರಚಿತ ಕವಿತೆ ವಾಚಿಸಿದರು.
ಕಸಾಪ ಗೌರವ ಕೋಶಧ್ಯಕ್ಷ, ಕಲಾಸಿರಿ ಪ್ರತಿಷ್ಠಾನದ ಸಂಚಾಲಕ ಸಾಹಿತಿ ಶ್ರೀಧರ ಶೇಟ್ ಎಲ್ಲರನ್ನು ಸ್ವಾಗತಿಸಿ ಆಶಯ ನುಡಿಗಳನ್ನಾಡಿದರು.ಶಿಕ್ಷಕಿ, ಕಲಾಸಿರಿ ಪ್ರತಿಷ್ಠಾನದ ಕಾರ್ಯದರ್ಶಿ ಹೇಮಲತಾ ಶ್ರೀಧರ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಾಹಿತಿ ಹಾಗೂ ಜನಪ್ರಿಯ ವೈದ್ಯ ಡಾ. ಆರ್ ವಿ. ಸರಾಫ್ ಅವರನ್ನು ಸ್ಮರಿಸಿ ಮೌನಚಾರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ ಕೆರೆಕಟ್ಟೆ, ಕಸಾಪ ಕಾರ್ಯಕಾರಿ ಸಮಿತಿಯ ಪೂರ್ಣಿಮಾ ಕರ್ಕಿಕರ್, ವಿನಾಯಕ ಅವಧಾನಿ, ಗಜಾನನ ಹೆಗಡೆ,ತಿಮ್ಮಪ್ಪ ದೇವಾಡಿಗ, ಗಣೇಶ್ ಗೌಡ, ನಾರಾಯಣ ದೇವಾಡಿಗ, ರಾಜೇಶ ನಾಯ್ಕ,ವೆಂಕಟೇಶ್ ಕೊಡಿಹಿತ್ತಲು, ನಾರಾಯಣ ಮೊಗೇರ್, ವಿನಾಯಕ ಚಿತ್ರಾಪುರ,ಡಾ.ಶ್ರೇಯಾoಕ್, ಶ್ರೀಶಾ,ಪ್ರಣತಿ, ಲಕ್ಷ್ಮೀ, ಶೀತಲಾ ಚಿತ್ರಾಪುರ ಮುಂತಾದವರು ಉಪಸ್ಥಿತರಿದ್ದರು.






