'ಕಣ್ಣನ್ ಗುರುಸ್ವಾಮಿ' ಹೆಸರಿನಲ್ಲಿ ಭಟ್ಕಳಕ್ಕೆ ಬಾಂಬ್ ಬೆದರಿಕೆ
ಹುಸಿ ಬಾಂಬ್ ಬೆದರಿಕೆ ಎಂದ ಎಸ್ಪಿ ನಾರಾಯಣ್

ಭಟ್ಕಳ: ಭಟ್ಕಳ ಪಟ್ಟಣವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ 'ಕಣ್ಣನ್ ಗುರುಸ್ವಾಮಿ' ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಇದೊಂದು ಹುಸಿ ಬೆದರಿಕೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್ ತಿಳಿಸಿದ್ದಾರೆ.
ಈ ಘಟನೆಯಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ತೀವ್ರ ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.
ಜು.10ರ ಬೆಳಗ್ಗೆ 7:22ಕ್ಕೆ ಇ-ಮೇಲ್ ಒಂದರಿಂದ ಭಟ್ಕಳ ಶಹರ ಠಾಣೆಯ ಇ-ಮೇಲ್‌ಗೆ ಎರಡು ಬೆದರಿಕೆ ಸಂದೇಶಗಳು ಬಂದಿವೆ. ಮೊದಲ ಸಂದೇಶದಲ್ಲಿ 'ವಿ ವಿಲ್ ಪ್ಲಾಂಟ್ ಬಾಂಬ್ ಇನ್ ಭಟ್ಕಳ ಟೌನ್' ಎಂದು ತಿಳಿಸಲಾಗಿದ್ದು, ಎರಡನೇ ಸಂದೇಶದಲ್ಲಿ 'ಆಲ್ ದ ಬಾಂಬ್ ವಿಲ್ ಬ್ಲಾಸ್ಟ್ ಇನ್ 24 ಆರ್ಸ್' ಎಂದು ಎಚ್ಚರಿಕೆ ನೀಡಲಾಗಿದೆ.
ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಭಟ್ಕಳ ಶಹರ ಠಾಣೆಯ ಪಿಎಸ್‌ಐ ನವೀನ್ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶ್ವಾನ ದಳ ಹಾಗೂ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದೊಂದಿಗೆ ತೀವ್ರ ತಪಾಸಣೆ ನಡೆಸಿದ್ದಾರೆ.
ಸಾರ್ವಜನಿಕರಲ್ಲಿ ಆತಂಕ: ಈ ಬೆದರಿಕೆ ಸಂದೇಶದಿಂದ ಭಟ್ಕಳ ಪಟ್ಟಣದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ, ಪೊಲೀಸ್ ಇಲಾಖೆಯಿಂದ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದ ಸಾರ್ವಜನಿಕರಿಗೆ ಭರವಸೆ ಮೂಡಿಸಲಾಗುತ್ತಿದೆ.
ಈ ಕುರಿತಂತೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು, ಯಾರೋ ತಲೆ ಹಿಡುಕರು ಇಮೇಲ್ ಮಾಡಿದ್ದಾರೆ. ಎಲ್ಲವನ್ನು ಪರಿಶೀಲನೆ ಮಾಡಲಾಗಿದೆ ಯಾವುದೇ ತೊಂದರೆ ಇಲ್ಲ ಭಟ್ಕಳ ಸೇಫ್ ಆಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ ಶಾಂತಿ ಕಾಪಾಡಿಕೊಂಡು, ಯಾವುದೇ ಗೊಂದಲಕ್ಕೆ ಒಳಗಾಗದಂತೆ ತಿಳಿಸಿದ್ದಾರೆ.







