ಅಶ್ಲೀಲ ಚಿತ್ರ, ವಿಡಿಯೋ ಇತರರಿಗೆ ಕಳುಹಿಸಿ ಪ್ರಕರಣ: ಆರೋಪಿ ಯುವಕ ಪೊಲೀಸ್ ವಶಕ್ಕೆ

ಭಟ್ಕಳ: ಅಪ್ರಾಪ್ತ ಬಾಲಕಿಯರನ್ನು ಒಳಗೊಂಡ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿ, ಡೌನ್‌ಲೋಡ್ ಮಾಡಿ ಇತರರಿಗೆ ಹಂಚಿಕೆ ಮಾಡಿದ ಆರೋಪದ ಮೇಲೆ ಇಂಜಿನಿಯರಿಂಗ್ ಪದವೀಧರ ಯುವಕನೊಬ್ಬನನ್ನು ಭಟ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಪಟ್ಟಣದ ನಿವಾಸಿಯಾಗಿದ್ದು, ಸರ್ಕಾರಿ ಕಚೇರಿಯೊಂದರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ನಡೆಸಿದ ತಾಂತ್ರಿಕ ತನಿಖೆಯಲ್ಲಿ ಆರೋಪಿ ವಿವಿಧ ಆನ್‌ಲೈನ್ ವೇದಿಕೆಗಳಲ್ಲಿ ಅಪ್ರಾಪ್ತರನ್ನು ಒಳಗೊಂಡ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸಿ ಸಂಗ್ರಹಿಸಿಕೊಂಡಿರುವುದು ಹಾಗೂ ಅಂತಹ ವಿಷಯವನ್ನು ಮಹಿಳೆಯೊಬ್ಬರ ಮೊಬೈಲ್‌ಗೆ ಕಳುಹಿಸಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಂದ ದೊರೆತ ಮಾಹಿತಿಯ ಮೇರೆಗೆ ಭಟ್ಕಳ ನಗರ ಠಾಣೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ, ಆತನ ಮೊಬೈಲ್ ಫೋನ್ ಅನ್ನು ಜಪ್ತಿ ಮಾಡಿದ್ದಾರೆ. ಮೊಬೈಲ್‌ನಲ್ಲಿರುವ ಡಿಜಿಟಲ್ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪ್ರಾಪ್ತರನ್ನು ಒಳಗೊಂಡ ಅಶ್ಲೀಲ ವಿಷಯವನ್ನು ವೀಕ್ಷಿಸುವುದು, ಸಂಗ್ರಹಿಸುವುದು ಅಥವಾ ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಪೋಕ್ಸೊ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.






