ಬಿಳಲಖಂಡದಲ್ಲಿ ಕಸ ಎಸೆಯುವವರ ಮೇಲೆ ಸಿಸಿಟಿವಿ ಕಣ್ಗಾವಲು: ನಿಯಮ ಉಲ್ಲಂಘಿಸಿದವರಿಗೆ ದಂಡ

ಭಟ್ಕಳ: ತಾಲೂಕಿನ ಬಿಳಲಖಂಡ ಗ್ರಾಮದ ಸಾಗರ ರಸ್ತೆ ಸೇರಿದಂತೆ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕಸ ಎಸೆಯುವವರ ವಿರುದ್ಧ ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಗ್ರಾಮವನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತವಾಗಿಡುವ ಉದ್ದೇಶದಿಂದ ಎರಡು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಬಿಳಲಖಂಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕೆಲವರು ಬಳಕೆಯಲ್ಲದ ವಸ್ತುಗಳು ಮತ್ತು ಇತರ ತ್ಯಾಜ್ಯವನ್ನು ಸಾಗರ ರಸ್ತೆಯ ಬದಿಯಲ್ಲಿ ತಂದು ಸುರಿಯುತ್ತಿರುವ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ನಿರಂತರ ದೂರು ನೀಡುತ್ತಿದ್ದರು. ಪಂಚಾಯಿತಿ ಹಾಗೂ ಸ್ಥಳೀಯರು ಹಲವು ಬಾರಿ ಸ್ವಚ್ಛತಾ ಕಾರ್ಯ ನಡೆಸಿ, ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ಕಸ ಎಸೆಯದಂತೆ ಮನವಿ ಮಾಡಿದರೂ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿರಲಿಲ್ಲ.
ಇದೇ ಪ್ರದೇಶದ ಸಮೀಪ ಪುರಸಭೆಯ ಘನತ್ಯಾಜ್ಯ ಸಂಸ್ಕರಣಾ ಘಟಕವಿದ್ದರೂ, ಕೆಲವರು ರಸ್ತೆ ಬದಿಯಲ್ಲೇ ಕಸ ಸುರಿದು ಪರಿಸರ ಹಾಗೂ ಸಾರ್ವಜನಿಕ ನೈರ್ಮಲ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವುದು ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಮುಟ್ಟಳ್ಳಿ ಗ್ರಾಮ ಪಂಚಾಯಿತಿಯು ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಇಟಗಿ ಅವರ ನೇತೃತ್ವದಲ್ಲಿ ಕಸ ಎಸೆಯುವವರನ್ನು ಗುರುತಿಸುವ ಉದ್ದೇಶದಿಂದ ಎರಡು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಿದೆ.
ಈ ಕುರಿತು ಮಾತನಾಡಿದ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಇಟಗಿ, "ಬಿಳಲಖಂಡ–ಸಾಗರ ರಸ್ತೆ ಭಾಗದಲ್ಲಿ ದೀರ್ಘಕಾಲದಿಂದ ರಸ್ತೆ ಬದಿಯಲ್ಲಿ ಕಸ ಸುರಿಯುವ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾ ಅಳವಡಿಸಿದ ಬಳಿಕ ಇಂತಹ ಪ್ರಕರಣಗಳು ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ. ಆದರೂ ನಿರಂತರವಾಗಿ ನಿಗಾ ವಹಿಸಲಾಗು ವುದು. ಕಸ ಎಸೆಯುತ್ತಿರುವುದು ಕಂಡುಬಂದರೆ ಮೊದಲಿಗೆ ದಂಡ ವಿಧಿಸಲಾಗುವುದು. ಮರುಕಳಿಸಿದರೆ ಘನತ್ಯಾಜ್ಯ ನಿರ್ವಹಣಾ ನಿಯಮಗಳಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದರು.
"ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಗ್ರಾಮ ಪಂಚಾಯಿತಿ ಯೊಂದಿಗೆ ಸಹಕರಿಸಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದೆ ಪರಿಸರ ಸಂರಕ್ಷಣೆಗೆ ಕೈಜೋಡಿಸ ಬೇಕು" ಎಂದು ಅವರು ಮನವಿ ಮಾಡಿದರು.






