ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ: ನ್ಯೂ ಶಮ್ಸ್ ಶಾಲೆ ಮನವಿ

ಭಟ್ಕಳ: ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಪ್ರವೃತ್ತಿಯನ್ನು ತಡೆಗಟ್ಟಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನ್ಯೂ ಶಮ್ಸ್ ಶಾಲೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಕ್ಕಳ ದಿನಾಚರಣೆಯ ಅಂಗವಾಗಿ ನ್ಯೂ ಶಮ್ಸ್ ಶಾಲೆ, ಭಟ್ಕಳದ ವತಿಯಿಂದ ಸೋಮವಾರ ಮಾದಕ ವ್ಯಸನ ವಿರೋಧಿ ಜನಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಯಿತು. ಬಂದರ್ ರಸ್ತೆಯಲ್ಲಿ ಭಟ್ಕಳ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಅವರು ರ್ಯಾಲಿಗೆ ಚಾಲನೆ ನೀಡಿದರು.
ರ್ಯಾಲಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗಿದರು. ಬಂದರ್ ರಸ್ತೆಯಿಂದ ಆರಂಭಗೊಂಡ ರ್ಯಾಲಿ ಶಮ್ಸುದ್ದೀನ್ ವೃತ್ತದ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿತು. ಈ ಸಂದರ್ಭದಲ್ಲಿ ಭಟ್ಕಳ ನಗರ ಠಾಣೆಯ ಪಿಎಸ್‌ಐ ನವೀನ್ ಅವರು ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು.
ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಮಾದಕ ಪದಾರ್ಥಗಳ ಸೇವನೆಯ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದು ಅವರ ಶೈಕ್ಷಣಿಕ ಪ್ರಗತಿ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಪಿಡುಗನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ಮಾದಕ ಪದಾರ್ಥಗಳ ಅಕ್ರಮ ಮಾರಾಟ ಹಾಗೂ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದರ ಜೊತೆಗೆ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ವ್ಯಸನಕ್ಕೆ ಒಳಗಾದ ಯುವಜನರಿಗೆ ಚಿಕಿತ್ಸೆ, ಸಮಾಲೋಚನೆ ಹಾಗೂ ಪುನರ್ವಸತಿ ಸೌಲಭ್ಯ ಒದಗಿಸುವುದು ಮತ್ತು ಪೊಲೀಸ್, ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗಳ ಸಮನ್ವಯದಲ್ಲಿ ಪರಿಣಾಮಕಾರಿ ಮಾದಕ ವ್ಯಸನ ವಿರೋಧಿ ಅಭಿಯಾನ ನಡೆಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಲಾಗಿದೆ.
ನ್ಯೂ ಶಮ್ಸ್ ಶಾಲೆಯ ಪ್ರಾಂಶುಪಾಲರ ಪರವಾಗಿ ಸಲ್ಲಿಸಲಾದ ಮನವಿಯನ್ನು ಸ್ವೀಕರಿಸಿದ ಸಹಾಯಕ ಆಯುಕ್ತ ಮಹೇಶ್ ಅವರು, ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಮ್ಸ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಮೌಲಾನ ಝಿಯಾ ಉರ್ ರಹಮಾನ್ ನದ್ವಿ, ಸದಸ್ಯ ಮೌಲಾನ ಅಝೀಝುರ್ ರಹಮಾನ್ ನದ್ವಿ, ಶಿಕ್ಷಕರಾದ ಮುಹಮ್ಮದ್ ರಝಾ ಮಾನ್ವಿ, ಅಬ್ದುಲ್ಲಾ ರಬಿ ಖಲಿಫಾ, ಮೌಲಾನ ಸುಭಾನ್ ನದ್ವಿ ಮತ್ತಿತರರು ಉಪಸ್ಥಿತರಿದ್ದರು.






