ಭಟ್ಕಳ| ಹದಗೆಟ್ಟ ಹೆಬಳೆ ಪಂಚಾಯತ್ ರಸ್ತೆ; ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರಿಂದ ಸಚಿವರಿಗೆ ಮನವಿ

ಭಟ್ಕಳ: ತಾಲೂಕಿನ ಹೆಬಳೆ ಪಂಚಾಯತ್‌ನ ವ್ಯಾಪ್ತಿಯ ಜಾಮಿಯಾ ಬಾದ್ ಪ್ರದೇಶದ ರಹಮತಾಬಾದ್ ನಿವಾಸಿಗಳು ಹಲವು ತಿಂಗಳಿನಿಂದ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪರದಾಡುತ್ತಿದ್ದು, ಕೂಡಲೆ ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ರಹಮತಾಬಾದ್ ಫ್ರೆಂಡ್ಸ್ ಫೋರಂ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಮನವಿ ಪತ್ರದಲ್ಲಿ, ತೆಂಗಿನಗುಂಡಿ ಕ್ರಾಸ್‌ನಿಂದ ರಹಮತಾಬಾದ್ ಹಾಗೂ ಮೀನುಗಾರಿಕಾ ಬಂದರನ್ನು ಸಂಪರ್ಕಿಸುವ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ (PWD) ರಸ್ತೆ ಕಳೆದ ಹಲವು ತಿಂಗಳಿಂದ ಅತ್ಯಂತ ದುಸ್ಥಿತಿಯಲ್ಲಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಕಳೆದ ವರ್ಷವೂ ಇದೇ ರೀತಿಯ ಪರಿಸ್ಥಿತಿ ಉಂಟಾಗಿದ್ದರೂ ಅಧಿಕಾರಿಗಳ ಗಮನಕ್ಕೆ ತಂದ ವಿನಂತಿಗಳಿಗೆ ಫಲಿತಾಂಶ ದೊರೆತಿಲ್ಲ ಎಂದು ಆರೋಪಿಸಲಾಗಿದೆ.
ರಸ್ತೆಯಲ್ಲಿರುವ ದೊಡ್ಡ ದೊಡ್ಡ ಗುಂಡಿಗಳು ವಾಹನಗಳಿಗೆ ಹಾನಿ ಉಂಟುಮಾಡುತ್ತಿರುವುದರ ಜೊತೆಗೆ, ದೈನಂದಿನ ಸಂಚಾರದ ವೇಳೆ ಪಾದಚಾರಿಗಳು ಮತ್ತು ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಪ್ರಕರಣಗಳೂ ಸಂಭವಿಸುತ್ತಿವೆ. ಸ್ಥಳೀಯರ ಪ್ರಕಾರ, ಈ ರಸ್ತೆ ದಿನೇದಿನೇ ಅಪಾಯಕಾರಿಯಾಗುತ್ತಿದೆ ಎಂಬ ದೂರು ಕೇಳಿ ಬರತೊಡಗಿದೆ.
ಮನವಿ ಪತ್ರದಲ್ಲಿ ಸಚಿವರಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದ್ದು, ಇಲ್ಲಿನ ನಿವಾಸಿಗಳು ಸಹನೆ ಕಳೆದುಕೊಳ್ಳುವುದಕ್ಕಿಂತ ಮುನ್ನ ಸಮಸ್ಯೆಯನ್ನು ಬಗೆಹರಿಸಬೇಕು, ಇಲ್ಲದೆ ಇದ್ದ ಸಂದರ್ಭ ಸಾರ್ವಜನಿಕರು ಪ್ರತಿಭಟನೆಯನ್ನು ನಡೆಸಲು ಹೆದರುವುದಿಲ್ಲ ಎಂದು ಎಚ್ಚರಿಸಲಾಗಿದೆ.
ಇದೇ ವೇಳೆ, ರಸ್ತೆ ದುರಸ್ತಿ ಕಾರ್ಯದೊಂದಿಗೆ ರಹಮತಾಬಾದ್ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ (ಡ್ರೆನೇಜ್ ಸಿಸ್ಟಮ್) ಹಾಗೂ ಇತರ ಮೂಲಭೂತ ನಾಗರಿಕ ಸೌಕರ್ಯಗಳ ಒದಗಿಸುವತ್ತ ಗಮನಹರಿಸಲು ಸಚಿವರು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ಫೋರಂ ಮನವಿ ಮಾಡಿದೆ.







