ಹೆಬಳೆ ಪಂಚಾಯತ್ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲ; ಪಂಚಾಯತ್ ಸದಸ್ಯ ಆರೋಪ
ಭಟ್ಕಳ: ಭಟ್ಕಳ ತಾಲೂಕಿನ 16 ಗ್ರಾ.ಪಂ.ಗಳ ಪೈಕಿ ಹೆಬಳೆ ಗ್ರಾಮ ಪಂಚಾಯಿತಿಯು ಘನತ್ಯಾಜ್ಯ ನಿರ್ವಹಣೆಯ ಅಸಮರ್ಥ ನೀತಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ವ್ಯಾಪಕ ಕಸವಿಲೇವಾರಿ ಹಾಗೂ ಅನೈರ್ಮಲ್ಯಕ್ಕೆ ಕಾರಣವಾಗಿದೆ. ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸುವಲ್ಲಿ ಪಂಚಾಯತ್ ವಿಫಲವಾದ ಪರಿಣಾಮವಾಗಿ ಪ್ರಮುಖ ಶಿಕ್ಷಣ ಕೇಂದ್ರಗಳು ಮತ್ತು ಧಾರ್ಮಿಕ ಸ್ಥಳಗಳಿಂದ ಕೇವಲ 20 ಮೀಟರ್ ದೂರದಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಹೆಬಳೆ ಪಂಚಾಯತ್ ಜಾಮಿಯಾಬಾದ್ ವಾರ್ಡಿನ ಸದಸ್ಯ ಯೂಸೂಫ್ ಮುಲ್ಲಾ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸೋಮವಾರ ಮಾಧ್ಯಮಗಳಿಗೆ ಅಸಮರ್ಪಕ ತ್ಯಾಜ್ಯ ನಿರ್ವಾಹಣೆಯ ವೀಡಿಯೊ ತುಣುಕನ್ನು ನೀಡುವ ಮೂಲಕ ತಮ್ಮ ವಾರ್ಡ್‌ನಲ್ಲಿನ ಶೋಚನೀಯ ತ್ಯಾಜ್ಯ ನಿರ್ವಹಣೆಯ ಪರಿಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಸರ್ಕಾರಿ ಉರ್ದು ಪ್ರೌಢಶಾಲೆ, ಜಾಮಿಯಾ ಜಾಲಿ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಮತ್ತು ಸೈಯ್ಯದ್ನಾ ಇಬ್ರಾಹಿಂ ಜಾಮಿಯಾ ಮಸೀದಿ ಸುತ್ತಮುತ್ತಲಿನ ಪ್ರದೇಶಗಳು ತ್ಯಾಜ್ಯ ಸುರಿಯುವ ತಾಣವಾಗಿ ಮಾರ್ಪಟ್ಟಿದ್ದು, ಬೀದಿ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಸಮೀಪದ ಪಕ್ಕದ ರಸ್ತೆಯನ್ನು ಬಳಸುವ ಶಾಲಾ ಮಕ್ಕಳ ಮೇಲೆ ನಾಯಿದಾಳಿಯ ಸಂಭವನೀಯ ಅಪಾಯದ ಬಗ್ಗೆ ಆತಂಕಗೊಂಡ ಅವರು, ಅಧಿಕಾರಿಗಳ ಹೊಣೆಗಾರಿಕೆಯನ್ನು ಪ್ರಶ್ನೆ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಹೆಬಳೆ ಪಂಚಾಯಿತಿಯ ಎಲ್ಲ ಸದಸ್ಯರು ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಆಕ್ಷೇಪ ವ್ಯಕ್ತಪಡಿಸಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಒಪ್ಪಿಗೆ ಸೂಚಿಸಿರುವುದನ್ನು ಬಹಿರಂಗಪಡಿಸಿದ ಅವರು, ಯಾರ ಒತ್ತಡದಿಂದಾಗಿ ತ್ಯಾಜ್ಯ ವಿಲೇವಾರಿ ಘಟಕ ಇದುವರೆಗೂ ಸ್ಥಾಪನೆ ಯಾಗಿಲ್ಲ, ಪಂಚಾಯತ್ ಸದಸ್ಯರಿಗೆ ಇದರ ಮಾಹಿತಿ ಇಲ್ಲ ಎಂದರೆ ಸಾರ್ವಜನಿಕರಿಗೆ ಯಾರು ಮಾಹಿತಿ ಕೊಡುತ್ತಾರೆ ಎಂದು ಯೂಸೂಫ್ ಮುಲ್ಲಾ ಬೇಸರ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಪರಿಸ್ಥಿತಿ ಹದಗೆಟ್ಟಿದ್ದು, ತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಹೆಬಳೆ ಪಂಚಾಯತ್‌ನಿಂದ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಮುದಾಯ ಮತ್ತು ಸಂಬಂಧಪಟ್ಟ ನಾಗರಿಕರು ಒತ್ತಾಯಿಸಿದ್ದಾರೆ. ಸ್ವಚ್ಛ ಮತ್ತು ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿ ಕೊಳ್ಳಲು ಉನ್ನತ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.