Instagramನಲ್ಲಿ ವೀಲಿಂಗ್ ವಿಡಿಯೊ ಅಪ್‌ಲೋಡ್: ಪ್ರಕರಣ ದಾಖಲು

ಭಟ್ಕಳ: ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲಿಂಗ್ ಮಾಡಿ ಅದರ ವಿಡಿಯೊಗಳನ್ನು Instagramನಲ್ಲಿ ಪ್ರಕಟಿಸಿ ಯುವಕರನ್ನು ಅಪಾಯಕಾರಿ ಸಾಹಸಕ್ಕೆ ಪ್ರೇರೇಪಿಸಿದ ಆರೋಪದಡಿ ಅಪರಿಚಿತ ವ್ಯಕ್ತಿಯ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಭಟ್ಕಳ ನಗರ ಪೊಲೀಸ್ ಠಾಣೆಯ ಸಾಮಾಜಿಕ ಜಾಲತಾಣ ನಿಗಾ ಘಟಕದ ಪೊಲೀಸ್ ಕಾನ್‌ಸ್ಟೆಬಲ್ ಸಚಿನ್ ಯಶವಂತರಾವ್ ಪವಾರ್ ಅವರು ಜೂನ್ 25ರಂದು ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ನಡೆಸುತ್ತಿದ್ದ ವೇಳೆ, 'akkihotpiston' ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಟ್ಕಳ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ವೀಲಿಂಗ್ ನಡೆಸಿರುವ ಹಲವು ವಿಡಿಯೊಗಳು ಪ್ರಕಟವಾಗಿರುವುದು ಗಮನಕ್ಕೆ ಬಂದಿದೆ.
ಸಾರ್ವಜನಿಕ ರಸ್ತೆಗಳಲ್ಲಿ ಈ ರೀತಿಯ ಅಪಾಯಕಾರಿ ಸಾಹಸ ಪ್ರದರ್ಶಿಸುವುದು ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವುದಲ್ಲದೆ, ಇತರ ಯುವಕರು ಇಂತಹ ಕೃತ್ಯಗಳನ್ನು ಅನುಕರಿಸಲು ಪ್ರೇರೇಪಿಸುವ ಸಾಧ್ಯತೆಯೂ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಇನ್‌ಸ್ಟಾಗ್ರಾಂ ಖಾತೆಯ ನಿರ್ವಾಹಕರ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಖಾತೆ ನಿರ್ವಹಿಸುತ್ತಿರುವ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.






