ಗೇಟ್ ಕುಸಿದು ಬಿದ್ದು ಕೈಗಾ ಅಣು ಸ್ಥಾವರದ ಭದ್ರತಾ ಸಿಬ್ಬಂದಿ ಮೃತ್ಯು

ಸಾಂದರ್ಭಿಕ ಚಿತ್ರ | PC : PTI
ಕಾರವಾರ: ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಓರ್ವ ಹೆಡ್ ಕಾನ್ ಸ್ಟೆಬಲ್ ಮೈಮೇಲೆ ಭಾರಿ ಗೇಟ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಮಹಾರಾಷ್ಟ್ರದ ಮಹಿಮಾನಗಡ್ ನ ನಿವಾಸಿ, ಶೇಖರ ಭೀಮರಾವ್ ಜಗದಾಲೆ (48) ಮೃತಪಟ್ಟ ಸಿಬ್ಬಂದಿ. ಕೈಗಾ ಅಣು ಸ್ಥಾವರದ ಒಳ ಆವರಣದಲ್ಲಿರುವ 'ಅಣು ತ್ಯಾಜ್ಯ ವಿಲೇವಾರಿ ಘಟಕ'ದ ಗೇಟ್ ಎದುರು ಶೇಖರ ರಾತ್ರಿ ಪಾಳಿಯಲ್ಲಿ ಕಾವಲು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ, ಅತೀ ಭಾರದ ಗೇಟ್ ಇದ್ದಕ್ಕಿದ್ದಂತೆ ಕುಸಿದು ಅವರ ಮೈಮೇಲೆ ಬಿದ್ದಿದೆ. ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಎಸ್ಟಿಎಫ್ ಸಿಬ್ಬಂದಿ ಸ್ಥಳೀಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೈಗಾದ ಕೆಜಿಎಸ್ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮಲ್ಲಾಪುರ ಠಾಣೆ ಪೊಲೀಸರು ಮತ್ತು ಅಣು ಸ್ಥಾವರದ ಮೂಲಗಳು ಖಚಿತಪಡಿಸಿವೆ.
ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.





