ಕಾರವಾರ| ದನದ ಮಾಂಸ ಅಕ್ರಮ ಸಾಗಾಟ ಪ್ರಕರಣ: ವಾಹನ ಚಾಲಕ ಸಿದ್ದಪ್ಪ ಬೂದ್ನೂರು, ರಾಜು ಬಾಳನಾಯ್ಕ ಸೆರೆ

ಕಾರವಾರ: ಬೆಳಗಾವಿಯಿಂದ ಗೋವಾಕ್ಕೆ ಅಕ್ರಮವಾಗಿ ದನದ ಮಾಂಸ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜೊಯಿಡಾ ತಾಲೂಕಿನ ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಅವರಿಂದ 6.75 ಲಕ್ಷ ಮೌಲ್ಯದ 1930 ಕೆ.ಜಿ. ದನದ ಮಾಂಸ ಹಾಗೂ ಮಾಂಸ ಸಾಗಣೆಗೆ ಬಳಸಿದ್ದ 8 ಲಕ್ಷ ಮೌಲ್ಯದ ಟಾಟಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ವಾಹನದ ಚಾಲಕ ಸಿದ್ದಪ್ಪ ಬಾಳಪ್ಪ ಬೂದ್ನೂರು ಮತ್ತು ರಾಜು ಬಾಳ ನಾಯ್ಕ ಎಂದು ಗುರುತಿಸಲಾಗಿದೆ. ಬೆಳಗಾವಿಯ ಅಮೂಲ್ ಮೋಹನ್‌ದಾಸ್ ಎಂಬಾತನ ನಿರ್ದೇಶನದಂತೆ ಈ ಮಾಂಸವನ್ನು ರಾಮನಗರದ ಅನಮೂಡ ಮಾರ್ಗವಾಗಿ ಗೋವಾಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ರಾಮನಗರ ಬಳಿ ಗಸ್ತು ತಿರುಗುತ್ತಿದ್ದ ಎಎಸ್‌ಐ ರಾಜಪ್ಪ ದೊಡ್ಡಮನಿ ಅವರು ಅನಮೂಡ ಕಡೆಗೆ ಹೋಗುತ್ತಿದ್ದ ಟಾಟಾ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದರು. ಆದರೆ, ವಾಹನ ನಿಲ್ಲಿಸದೆ ವೇಗವಾಗಿ ಸಾಗಿದ್ದರಿಂದ ಅನುಮಾನಗೊಂಡ ಪೊಲೀಸರು, ವಾಹನವನ್ನು ಬೆನ್ನಟ್ಟಿ ರಾಮನಗರ ಬಳಿ ಅಡ್ಡಗಟ್ಟಿದರು. ಬಳಿಕ ಪಿಎಸ್‌ಐ ಮಹಾಂತೇಶ್ ಅವರು ವಾಹನವನ್ನು ತಪಾಸಣೆ ನಡೆಸಿದಾಗ, ಅದರಲ್ಲಿ ಬರೋಬ್ಬರಿ 1930 ಕೆ.ಜಿ. ದನದ ಮಾಂಸ ಇರುವುದು ಪತ್ತೆಯಾಯಿತು.
ಈ ಸಂಬಂಧ ಮಾಂಸದ ಮಾಲಕ ಅಮೂಲ್ ಮೋಹನ್‌ದಾಸ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಬಂಧಿತರ ವಿರುದ್ಧ ಪ್ರಿವೆನ್ಷನ್ ಆಫ್ ಕ್ಯಾಟಲ್ ಆಕ್ಟ್ 2020 ಮತ್ತು 325 BNS, 192 (A) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಸಿದ್ದಪ್ಪ ಬಿ. ಮತ್ತು ರಾಜು ನಾಯ್ಕ ಅವರನ್ನು ಕಾರಾಗೃಹ ಬಂಧನಕ್ಕೆ ಒಪ್ಪಿಸಿದ್ದಾರೆ.







