ಕಾರವಾರ | ಜಿಲ್ಲಾ ಕಾರಾಗೃಹದಲ್ಲಿ ಜೈಲರ್, ಮೂವರು ಸಿಬ್ಬಂದಿಯ ಮೇಲೆ ಕೈದಿಗಳಿಂದ ಹಲ್ಲೆ

ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಅವಕಾಶ ನೀಡದೆ ಕಠಿಣ ಕ್ರಮ ಕೈಗೊಂಡ ಕಾರಣಕ್ಕೆ ಜೈಲರ್ ಹಾಗೂ ಮೂವರು ಸಿಬ್ಬಂದಿಯ ಮೇಲೆ ಇಬ್ಬರು ವಿಚಾರಣಾಧೀನ ಕೈದಿಗಳು ಹಲ್ಲೆ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಮಂಗಳೂರು ಮೂಲದ ರೌಡಿಗಳಾದ ಕೌಶಿಕ್ ನಿಹಾಲ್ ಮತ್ತು ಮುಹಮ್ಮದ್ ಅಬ್ದುಲ್ ಫಯಾನ್ ಹಲ್ಲೆ ಆರೋಪಿಗಳಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಜೈಲರ್ ಕಲ್ಲಪ್ಪ ಗಸ್ತಿ ಮತ್ತು ಸಿಬ್ಬಂದಿಯನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಕೌಶಿಕ್ ಮತ್ತು ಅಬ್ದುಲ್ ಫಯಾನ್ ರನ್ನು ಮಂಗಳೂರು ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾದ ಕಾರಣ ಕಾರವಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಕೆಲ ದಿನಗಳಿಂದ ಜೈಲಿನಲ್ಲಿ ಮಾದಕ ಪದಾರ್ಥಗಳ ನಿಯಂತ್ರಣಕ್ಕೆ ಜೈಲರ್ ಕಲ್ಲಪ್ಪ ಸಂಪೂರ್ಣ ನಿರ್ಬಂಧ ಹೇರಿದ್ದರು ಮತ್ತು ತಪಾಸಣೆ ಬಿಗಿಗೊಳಿಸಿದ್ದರು. ಇದೇ ವಿಚಾರವಾಗಿ ಆರೋಪಿಗಳು ಜೈಲರ್ ಜೊತೆ ವಾಗ್ವಾದ ನಡೆಸಿದ್ದಾರೆ. ನಿಯಮ ಸಡಿಲಿಸಲು ಜೈಲರ್ ಒಪ್ಪದಿದ್ದಾಗ ರೊಚ್ಚಿಗೆದ್ದ ಆರೋಪಿಗಳು, ಜೈಲರ್ ಕಲ್ಲಪ್ಪ ಹಾಗೂ ಕರ್ತವ್ಯನಿರತ ಇತರ ಮೂವರು ಸಿಬ್ಬಂದಿಯ ಮೇಲೆ ಏಕಾಏಕಿ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಸಿಬ್ಬಂದಿಯ ಸಮವಸ್ತ್ರವನ್ನೂ ಹರಿದು ಹಾಕಿದ್ದಾರೆ.
ಜೈಲಿನ ಶಿಸ್ತು ಕಾಪಾಡಲು ಹೋದ ಅಧಿಕಾರಿಗಳ ಮೇಲೆಯೇ ನಡೆದ ಈ ಹಲ್ಲೆ ಪ್ರಕರಣವು ಕಾರಾಗೃಹದ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.







